ಎಣ್ಣೆ ಹೊಡದೋರ್ ಬದಕ್ತಾರಾ…?

Advertisement

ಧಾರವಾಡ: ನಿನ್ನೆಯಷ್ಟೇ ಶಾಸಕ ಅಮೃತ ದೇಸಾಯಿ ಅವರು ಭಾಷಣದಲ್ಲಿ ಹಾಲು ಕುಡಿದೋರು ಬದುಕಲ್ಲ, ವಿಷ ಕುಡಿದೋರ ಬದಕ್ತಾರಾ ಎಂದಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗರು ಎಣ್ಣೆ ಹೊಡದೋರ್ ಬದಕ್ತಾರಾ…? ಎಂದು ಶಾಸಕ ಅಮೃತ ದೇಸಾಯಿ ಅವರನ್ನು ಪ್ರಶ್ನಿಸಿದ್ದಾರೆ.
ಹಾಲು ಕುಡಿದೋರು ಬದುಕಲ್ಲ, ವಿಷ ಕುಡಿದೋರ ಬದಕ್ತಾರಾ… ಎಲ್ಲೋ ಕುಳಿತು ವಿಡಿಯೋ ಮಾಡಿ ನಾ ಬರ್ತೇನಿ ಬರ್ತೇನಿ ಅಂದ್ರ ನಿಂದ ದಾರಿ ಕಾಯಾಕತ್ತೇನಿ ಬಾರೋ ಎಂದು ಬಹಿರಂಗ ಸಭೆಯಲ್ಲಿಯೇ ಶಾಸಕ ಅಮೃತ ದೇಸಾಯಿ ಅವರು ಪರೋಕ್ಷವಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ರವಿವಾರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಸವಾಲ್ ಎಸೆದಿದ್ದರು.
ಆದರೆ, ಇದಕ್ಕೆ ಪ್ರತಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಬೆಂಬಲಿಗರು ಸೋಮವಾರ ಮುಂಜಾನೆ ಅಮೃತ ದೇಸಾಯಿ ಅವರೇ ಎದೆ ಹಾಲು ಕುಡಿದವರು ಉಳಿದಿಲ್ಲ ನಿಜ… ಹಗಲು ರಾತ್ರಿ ಸರಾಯಿ ಕುಡಿಯುವವರು ಉಳಿಯುತ್ತಾರೆಯೇ ಎಂದು ಫೇಸ್‌ಬುಕ್, ವಾಟ್ಸ್ಅಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಲ್ಲದೇ ಇನ್ನೂ ಹತ್ತಾರು ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಇನ್ನೂ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಅಖಾಡ ಸಿದ್ಧಗೊಳಿಸುತ್ತಿವೆ. ಆದರೆ, ಇತ್ತ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸೋಶಿಯಲ್ ಮೀಡಿಯಾ ವಾರ್ ಶುರುವಾಗಿದ್ದು ಪಡ್ಡೆ ಹುಡುಗರ ಬಾಯಿಗೆ ಆಹಾರವಾದಂತಾಗಿದೆ.