ಎಟಿಎಂ ವಾಹನದಲ್ಲಿ ದಾಖಲೆ ರಹಿತ ೧೦ ಲಕ್ಷ ರೂ. ನಗದು ವಶ

ಪೂಂಜಾಲಕಟ್ಟೆ
Advertisement

ಉಜಿರೆ: ದಾಖಲೆ ಇಲ್ಲದೆ ೧೦ ಲಕ್ಷ ರೂ. ನಗದು ಸಾಗಾಟ ಮಾಡುತ್ತಿದ್ದ ಎಟಿಎಂ ವಾಹನವನ್ನು ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ. ೧೦ರಂದು ರಾತ್ರಿ ೧೦ ಗಂಟೆಗೆ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಪೂಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರತರಾಗಿದ್ದ ಫ್ಲೈಯಿಂಗ್ ಸ್ಕ್ವಾಡ್ ಕಾರ್ತಿ ಮಧುಬಾಬು ಅವರ ತಂಡ ಕುಕ್ಕಳ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆಎ-೫೩ ಸಿ ೨೫೪೨ ನಂಬರಿನ ಎಟಿಎಂ ಸಾಗಾಟ ವಾಹನದಲ್ಲಿ ಸಮರ್ಪಕ ದಾಖಲೆಗಳಿಲ್ಲದೆ ಅವಧಿ ಮೀರಿ ೧೦ ಲಕ್ಷ ರೂ. ಮೊತ್ತವನ್ನು ರಾತ್ರಿ ೧೦ ಗಂಟೆ ಸುಮಾರಿಗೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ತಕ್ಷಣವೇ ಹಣ ಹಾಗೂ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರಗಳ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಬೈಕ್‌ನಲ್ಲಿ ಸಾಗಿಸುತ್ತಿದ್ದ, ೧ ಲಕ್ಷ ರೂ. ಮೊತ್ತವನ್ನು ವಶಕ್ಕೆ ಪಡೆದು ದೂರು ದಾಖಲಿಸಲಾಗಿತ್ತು. ಬಳಿಕ ಸೂಕ್ತ ದಾಖಲೆ ಒದಗಿಸಿದ್ದರಿಂದ ಹಿಂದಿರುಗಿಸಲಾಗಿತ್ತು.
ಇದೀಗ ಮೊದಲ ಬಾರಿಗೆ ದೊಡ್ಡ ಮೊತ್ತವೊಂದನ್ನು ದಾಖಲೆಯಿಲ್ಲದೆ ಎಟಿಎಂ ವಾಹನದಲ್ಲಿ ಸಾಗಾಟ ಮಾಡಿರುವುದು ಕಂಡುಬಂದಿದೆ.