ಎಗ್ಗಿಲ್ಲದ ಮಾತಿಗೆ ಆಯೋಗದ ಚಾಟಿ

Advertisement

ಚುನಾವಣೆ ಬಂತು ಎಂದ ಕೂಡಲೇ ಎಲ್ಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ಮಾತಿಗೆ ಮಿತಿ ಇಲ್ಲ ಎಂದೇ ಭಾವಿಸುತ್ತಾರೆ. ಚುನಾವಣೆ ಆಯೋಗ ಪ್ರತಿಯೊಬ್ಬರ ಮಾತಿಗೂ ಒಂದು ಸಂಹಿತೆಯ ಚೌಕಟ್ಟು ರಚಿಸಿ ಮಿತಿಮೀರಿದಾಗ ನಿರ್ದಿಷ್ಟ ಪದಬಳಕೆಗೆ ನ್ಯಾಯಾಲಯ ಶಿಕ್ಷೆ ವಿಧಿಸುವಂತೆ ಮಾಡಬೇಕು.

ಚುನಾವಣೆ ಕಾಲದಲ್ಲಿ ಪ್ರಚಾರ ಭಾಷಣ ಮಾಡುವಾಗ ಎಲ್ಲ ರಾಜಕೀಯ ಪಕ್ಷಗಳ ನಾಯಕರ ಮಾತುಗಳಿಗೆ ಮಿತಿ ಎಂಬುದೇ ಇರುವುದಿಲ್ಲ. ಪ್ರತಿಪಕ್ಷದವರನ್ನು ನಿಂದಿಸುವಾಗ ಸಂಯಮವೇ ಇರುವುದಿಲ್ಲ. ಇಂಥ ಪ್ರಕರಣಗಳಲ್ಲಿ ಚುನಾವಣೆ ಆಯೋಗ ಮತ್ತು ನ್ಯಾಯಾಲಯ ಕ್ರಮ ಕೈಗೊಳ್ಳುವುದು ವಿಳಂಬವಾಗುತ್ತದೆ. ಕೋಲಾರದಲ್ಲಿ ಕಳೆದ ಚುನಾವಣೆಯಲ್ಲಿ ರಾಹುಲ್ ಮಾಡಿದ ಟೀಕೆ ಇನ್ನೂ ನ್ಯಾಯಾಲಯದಲ್ಲಿದೆ. ವಿಳಂಬದಿಂದ ನಾಯಕರ ಮಾತಿಗೆ ಮಿತಿ ವಿಧಿಸಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಕಾಲದಲ್ಲಿ ಅನುಸರಿಸಬೇಕಾದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತದೆ. ಅದೇರೀತಿ ಭಾಷಣಕ್ಕೂ ಒಂದು ನೀತಿಸಂಹಿತೆ ರಚಿಸುವುದು ಅಗತ್ಯ. ನಿರ್ದಿಷ್ಟ ಶಬ್ದಗಳನ್ನು ಬಳಸಿದರೆ ಶಿಕ್ಷೆ ಖಚಿತ ಎಂಬುದು ಸ್ಪಷ್ಟವಾಗಿರಬೇಕು. ಆಗ ಮಾತು ಮಿತಿಮೀರಿದಾಗ ಮತದಾರರೇ ಅವರನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸಬಹುದು. ಅಲ್ಲದೆ ಚುನಾವಣೆಗೆ ಸಂಬಂಧಿಸಿದ ದೂರುಗಳು ಕೂಡಲೇ ಬಗೆಹರಿಯುವಂತೆ ನ್ಯಾಯಾಲಯಗಳು ವಿಶೇಷ ಕೋರ್ಟ್‌ಗಳನ್ನು ರಚಿಸಬೇಕು. ಅಗ ಮಾತಿಗೆ ಲಕ್ಷ್ಮಣರೇಖೆ ಎಳೆಯುವುದು ಸುಲಭ. ಇತ್ತೀಚೆಗೆ ರಾಜಸ್ಥಾನದಲ್ಲಿ ರಾಹುಲ್ ಗಾಂಧಿ ಮೋದಿ ಅವರನ್ನು ನಿಂದಿಸಿ ಭಾಷಣ ಮಾಡಿದ್ದಕ್ಕೆ ಚುನಾವಣೆ ಆಯೋಗ ನೋಟಿಸ್ ನೀಡಿದೆ. ಇದರಿಂದ ತತ್‌ಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ. ಈ ರೀತಿ ಅವಹೇಳನಕಾರಿಯಾಗಿ ಮಾತನಾಡುವವರು ಬಹಳ ಕಡಿಮೆ ಜನ ಇದ್ದರು. ಈಗ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಇದನ್ನೇ ಚುನಾವಣೆ ಪ್ರಚಾರ ತಂತ್ರವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ. ಹಿಂದೆಯೂ ಚುನಾವಣೆಗಳು ನಡೆಯುತ್ತಿದ್ದವು. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಬಹಳ ಸಂಯಮದಿಂದ ಟೀಕೆ- ಟಿಪ್ಪಣಿ ಮಾಡುತ್ತಿದ್ದರು. ಅವರ ಟೀಕೆ ಏನಿದ್ದರೂ ಸರ್ಕಾರದ ಕಾರ್ಯಕ್ರಮಗಳ ಮೇಲೆ ಇರುತ್ತಿತ್ತೇ ಹೊರತು ವ್ಯಕ್ತಿಗತವಾಗಿ ಇರುತ್ತಿರಲಿಲ್ಲ.. ಈಗ ಎಲ್ಲವೂ ಬದಲಾಗಿದೆ. ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಅಪಶಕುನದ ಸಂಕೇತ, ಜೇಬುಗಳ್ಳ ಎಂದೆಲ್ಲ ದೂಷಿಸಿದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ರಾಹುಲ್ ವಿರುದ್ಧ ಟೀಕಾಪ್ರಹಾರವನ್ನೇ ನಡೆಸುತ್ತಾರೆ. ಈ ಟೀಕಾಸ್ತ್ರಗಳಿಂದ ಕಾಲಹರಣವಾಗುತ್ತದೆಯೇ ಹೊರತು ಜನರಿಗೆ ಉಪಯೋಗವೇನೂ ಆಗುವುದಿಲ್ಲ. ಚುನಾವಣೆ ಕಾಲದಲ್ಲಿ ಜನ ಬಹಿರಂಗ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲ ಉದ್ದೇಶವೇ ಎಲ್ಲ ರಾಜಕೀಯ ಪಕ್ಷಗಳ ನೀತಿ- ಕಾರ್ಯಕ್ರಮ ತಿಳಿದುಕೊಳ್ಳುವುದು. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸದುಪಯೋಗಪಡಿಸಿಕೊಳ್ಳಬೇಕು. ನಾಯಕರು ಮಿತಿ ಮೀರಿ ವರ್ತಿಸಿದರೆ ಜನರೇ ನೇರವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗೆ ವ್ಯವಸ್ಥೆ ಮಾಡಬೇಕು. ಈಗ ಬಹಿರಂಗ ಸಭೆಯಲ್ಲಿ ಇತರರನ್ನು ಅವಹೇಳನ ಮಾಡುವುದೇ ಫ್ಯಾಷನ್ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಪ್ರತಿಪಕ್ಷದ ನಾಯಕರಾಗಿ ಉತ್ತಮ ಭಾಷೆ ಬಳಸುತ್ತಿದ್ದರು. ಬೇರೆ ದೇಶಗಳಿಗೆ ಹೋದರಂತೂ ಇವರ ಭಾಷಣಗಳಿಗೆ ಜನ ಕಿಕ್ಕಿರಿದು ತುಂಬಿರುತ್ತಿದ್ದರು. ಆಡಳಿತ ಪಕ್ಷದವರು ತಪ್ಪು ಮಾಡಿದರೆ ಅದನ್ನು ಮುಕ್ತವಾಗಿ ಟೀಕಿಸಲು ಹಲವು ವೇದಿಕೆಗಳಿವೆ. ಬಹಿರಂಗ ಸಭೆಯಲ್ಲಿ ಮಾತನಾಡುವಾಗ ಯಾವ ವಿಷಯವನ್ನು ಪ್ರಸ್ತಾಪಿಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿ ಕೊಳ್ಳುವಂತಾಗಬೇಕು. ನಮ್ಮಲ್ಲಿ ಮೊದಲಿನಿಂದಲೂ ಚುನಾವಣೆ ಕಾಲದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಭಾಷಣವನ್ನು ಬಹಳ ತಾಳ್ಮೆಯಿಂದ ಕೇಳುವ ಜನ ಸಮುದಾಯವಿದೆ. ಮತದಾನಕ್ಕೂ ಸಾರ್ವಜನಿಕ ಭಾಷಣಕ್ಕೂ ಸಂಬಂಧವಿಲ್ಲ. ಈಗ ಬಹಿರಂಗ ಸಭೆಗಳಿಗಿಂತ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವುದು ಮುಖ್ಯವಾಗಿದೆ. ಅದರಲ್ಲಿ ಬಳಸುವ ಭಾಷೆಗೂ ಮಿತಿ ಇಲ್ಲ. ಹೊಸನೀತಿ ಸಂಹಿತೆಯನ್ನು ರಚಿಸಿ ಮಾತುಗಳಿಗೂ ನಿರ್ಬಂಧ ವಿಧಿಸುವ ಕಾಲ ಬಂದಿದೆ. ಚುನಾವಣೆ ಕಾಲದಲ್ಲಿ ರಾಜಕಾರಣಿಗಳು ಮಾಡಿದ ತಪ್ಪಿಗೆ ಕೆಲವು ತಿಂಗಳಲ್ಲೇ ಶಿಕ್ಷೆ ವಿಧಿಸುವಂತಾಗಬೇಕು. ನ್ಯಾಯ ವಿತರಣೆ ವಿಳಂಬವಾದಂತೆ ಅದರ ಮಹತ್ವ ಕಡಿಮೆಯಾಗುತ್ತದೆ. ಚುನಾವಣೆ ಕಾಲದಲ್ಲಿ ವೆಚ್ಚಕ್ಕೆ ಮಿತಿ ವಿಧಿಸಲಾಗಿದೆ. ಅಲ್ಲದೆ ವಾಹನ ಮತ್ತಿತರ ಬಳಕೆಗೆ ಮಿತಿ ಇದೆ. ಅದೇ ರೀತಿ ಮಾತಿಗೂ ಮಿತಿ ಇರಬೇಕು. ಅದನ್ನು ಉಲ್ಲಂಘಿಸಿದರಿಗೆ ಕೂಡಲೇ ಶಿಕ್ಷೆ ವಿಧಿಸುವ ವ್ಯವಸ್ಥೆ ಇರಬೇಕು.