ಬೆಳಗಾವಿ: ಕರಾಳ ದಿನಾಚರಣೆಗೆ ಮಹಾರಾಷ್ಟ್ರದ ಶಿವಸೇನೆ ನಾಯಕರನ್ನು ಎಂಇಎಸ್ ಆಹ್ವಾನಿಸಿತ್ತು. ಆದರೆ ಮಹಾರಾಷ್ಟ್ರ ನಾಯಕರನ್ನು ಕರ್ನಾಟಕದ ಗಡಿ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಬಹುತೇಕರನ್ನು ಗಡಿಯಲ್ಲಿಯೇ ತಡೆದು ವಾಪಸ್ ಕಳಿಸಲಾಯಿತು.
ಶಿವಸೇನೆಯ ಕೊಲ್ಲಾಪುರ ಘಟಕದ ಅಧ್ಯಕ್ಷ ವಿಜಯ ದೇವಣೆ ಬೆಳಗಾವಿ ಪ್ರವೇಶಿಸಲು ಬಹುಕಾಲ ಕಾದು ನಿಂತರು. ಕುಗನೊಳ್ಳಿ ಚೆಕ್ ಪೋಸ್ಟ್ ಮೂಲಕ ಕರ್ನಾಟಕ ಪ್ರವೇಶಿಸಿದ್ದ ಅವರು, ಶಿನೋಳ್ಳಿ ಮಾರ್ಗವಾಗಿ ಬೆಳಗಾವಿ ಪ್ರವೇಶಿಸಲು ಯತ್ನಿಸಿದರು. ಶಿನೋಳ್ಳಿ ಚೆಕ್ ಪೋಸ್ಟ್ ಬಳಿಯೂ ಪೊಲೀಸರು ಬಂದೋಬಸ್ತ್ ಬಿಗಿ ಮಾಡಿದ್ದರು.ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಎಂಇಎಸ್ ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಹಾಕಿದ್ದರು. ಬೆಳಗಾವಿ ನಗರದಲ್ಲಿ ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಇದಕ್ಕಾಗಿ 3 ಡಿಸಿಪಿ, 12 ಎಸಿಪಿ, 52 ಇನ್ಸ್ಪೆಕ್ಟರ್, 2,500 ಕಾನ್ಸ್ಟೇಬಲ್, 9 ಸಿಎಆರ್ ತುಕಡಿ, 10 ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿತ್ತು. 35 ವಿಡಿಯೊ ಕ್ಯಾಮೆರಾ, 8 ಡ್ರೋನ್, 300 ಸಿಸಿಕ್ಯಾಮೆರಾಗಳ ಕಣ್ಗಾವಲು ಇತ್ತು.