ಆಶ್ವಿನ ಶುದ್ಧ ಪೂರ್ಣಿಮೆಯಂದು ಭೂಮಿದೇವಿಯನ್ನು ಪೂಜಿಸುತ್ತಾರೆ. ಪ್ರತಿದಿನವೂ ಭೂಮಿದೇವಿಯನ್ನು ಪೂಜಿಸಬೇಕಾಗಿದ್ದೆ. ಅಷ್ಟೇ ಏಕೆ ಪ್ರತಿ ಹೆಜ್ಜೆಗೂ ಭೂಮಿದೇವಿಯ ಬಗ್ಗೆ ಶ್ರದ್ಧಾ ಭಾವ ಇಟ್ಟುಕೊಳ್ಳಲು ಸಾಧ್ಯವಾದರೆ ಅದೂ ಕೂಡಾ ಯೋಗ್ಯವಾದದ್ದೇ ಆಗಿದೆ. ಏಕೆಂದರೆ ನಮ್ಮ ಇರುವಿಕೆಗೆ ಆಧಾರವಾದುದು ಈ ಭೂಮಿದೇವಿ. ಪ್ರತಿದಿನವೂ ಬೆಳಿಗ್ಗೆ ಏಳುವಾಗ ಮೊದಲ ಹೆಜ್ಜೆ ಇಡುವಾಗ ಭೂಮಿತಾಯಿಗೆ ನಮಸ್ಕಾರ ಮಾಡಿಕೊಂಡೆ ಏಳಬೇಕು. ಯಾವುದೇ ಪೂಜೆಯನ್ನು ಆರಂಭಿಸುವಾಗ ಭೂಮಿ ದೇವಿಗೆ ನಮಸ್ಕಾರ ಮಾಡಿಕೊಂಡೆ ಆರಂಬಿಸಬೇಕು. ಅನೇಕ ಶಿಷ್ಟರು ಇದನ್ನು ಮಾಡುತ್ತಾರೆ. ಆದರೂ ವರ್ಷಕ್ಕೊಮ್ಮೆ ವಿಶೇಷ ಪೂಜೆ ಸಾಧಿಸಿದರೆ ಪ್ರತಿದಿನದ ಸ್ಮರಣೆಯಲ್ಲಿ ಹೆಚ್ಚು ಶ್ರದ್ಧೆ ಬರುತ್ತದೆ. ಅದಕ್ಕಾಗಿ ಈ ದಿನ ಭೂಮಿದೇವಿಗೆ ವಿಶೇಷ ಪೂಜೆ.
ವೇದಗಳಿಂದಲೂ ಆರಂಭಿಸಿ ಪ್ರಾಚೀನ ಗ್ರಂಥಗಳಲ್ಲಿ ಭೂಮಿಯನ್ನು ತಾಯಿಯೆಂದು ಕರೆದಿದ್ದಾರೆ. ನಮ್ಮ ಶರೀರದಲ್ಲಿರುವ ಅನೇಕ ಧಾತುಗಳು ತಾಯಿ ಕಡೆಯಿಂದ ಬಂದಿರುತ್ತದೆ. ಹಾಗಾಗಿಯೇ ಶರೀರದಲ್ಲಿರುವ ಎಲ್ಲ ಸ್ಥೂಲ – ಸೂಕ್ಷ್ಮ ಘನ ವಸ್ತುಗಳು ಪೃಥ್ವಿಯಿಂದಲೇ ಬಂದಿದೆ. ಆದ್ದರಿಂದಲೇ ಇದನ್ನು ಪಾರ್ಥೀವ ಶರೀರ ಎಂಬುದಾಗಿ ಕರೆಯುತ್ತಾರೆ. ಪೃಥಿವೀಮಾತಃ ಮಾಮಾ ಹಿಗುಂಸೀಃ'.
ಭೂಮಿಃ ಮಾತಾ’ ಇತ್ಯಾದಿಯಾಗಿ ಅನೇಕ ಕಡೆ ವೇದಗಳಲ್ಲಿ ಭೂಮಿಯನ್ನು ತಾಯಿ ಎಂಬುದಾಗಿ ಹೇಳಿದ್ದಾರೆ. ಕಾಂಚಿ ಪರಮಾಚಾರ್ಯ ಚಂದ್ರಶೇಖರೇಂದ್ರ ಸರಸ್ವತೀ ಸ್ವಾಮಿಗಳು ವಿಶ್ವಕ್ಕೆ ನೀಡಿದ ಐದು ಚುಟುಕು ಸಂದೇಶಗಳಲ್ಲಿ ಜನನೀ ಪೃಥಿವೀ ಕಾಮಧುಖಾಸ್ತೇ' ಎಂಬ ಒಂದು ಚುಟುಕನ್ನು ಹೇಳಿದ್ದಾರೆ. ಕೇಳಿದ್ದನ್ನೆಲ್ಲಾ ಕೊಡಬಲ್ಲ ತಾಯಿ ಪೃಥಿವಿ ಇದ್ದಾಳೆ. ಪೃಥಿವಿ ಮಾತೆಗೆ ಕೇಳಿದ್ದನ್ನೆಲ್ಲಾ ಕೊಡುವ ಸಾಮರ್ಥ್ಯವಿದೆ ಎಂಬ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಗಾಂಧೀಜಿ ಒಂದು ಮಾತನ್ನು ಹೇಳಿದ್ದಾರೆ
ಈ ಭೂಮಿಗೆ ನಮಗೆ ಬೇಕಾದವುಗಳನ್ನು ಪೂರೈಸುವ ಶಕ್ತಿಯಿದೆ, ಆದರೆ ನಮ್ಮ ಸ್ವೇಚ್ಛಾರಗಳನ್ನು ಪೂರೈಸುವ ಶಕ್ತಿಯಿಲ್ಲ.’ ಮನುಷ್ಯನ ವಿವೇಚನಾರಹಿತ ಇಚ್ಛೆಗಳು ಇವತ್ತು ಭೂಮಿಯನ್ನು ಹಾಳುಮಾಡುತ್ತಿವೆ. ಅವನ ವಿವೇಚನಾರಹಿತ ಇಚ್ಛೆಗಳಿಗೆ ಆಧುನಿಕ ವಿಜ್ಞಾನದ ಸಾಕಾರ ದೊರೆಯುತ್ತಿದೆ.
ಪ್ರತಿದಿನವೂ ಎಸೆಯಲ್ಪಡುತ್ತಿರುವ ಲೆಕ್ಕವಿಲ್ಲದಷ್ಟು ಪ್ಲಾಸ್ಟಿಕ್, ವಿವೇಚನಾರಹಿತವಾಗಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರಗಳು, ತಡೆಯಿಲ್ಲದೆ ನಡೆಯುತ್ತಿರುವ ಸಸ್ಯಸಂಕುಲಗಳ ನಾಶ, ಕಾರ್ಖಾನೆಗಳ ತ್ಯಾಜ್ಯ, ಆಸ್ಪತ್ರೆಗಳ ತ್ಯಾಜ್ಯ ಹೀಗೆ ಪೃಥಿವಿಯ ಆರೋಗ್ಯವನ್ನು ಹಾಳು ಮಾಡುತ್ತಿರುವ ಸಂಗತಿಗಳು ಅನೇಕ ಇವೆ. ಇವೆಲ್ಲಕ್ಕಿಂತಲೂ ಕ್ರೂರವಾದದ್ದು ಕೊಳವೆ ಬಾವಿಗಳು.
ರಕ್ತದಾನಿಯ ರಕ್ತವನ್ನು ಹೀರಲು ಬಳಸಲ್ಪಡುವ ಸಿರೀಂಜುಗಳನ್ನು ಮೈತುಂಬ ಚುಚ್ಚಿ ಹಾಗೇ ಬಿಟ್ಟರೆ ಏನಾಗುತ್ತದೆ ? ಇದೇ ಸ್ಥಿತಿ ಈಗ ಪೃಥಿವೀ ಮಾತೆಗೆ ಆಗಿದೆ. ಆದ್ದರಿಂದ ಭೂಮಿಯನ್ನು ಪೂಜಿಸುವ ಈ ದಿನವಾದರೂ ಭೂ ತಾಯಿಗೆ ನಮ್ಮಿಂದಾಗುತ್ತಿರುವ ಈ ಅತಿರೇಕಗಳನ್ನು ಕೈ ಬಿಡುವ ಅಥವಾ ಕಡಿಮೆ ಮಾಡುವ ಪ್ರಾಮಾಣಿಕ ಸಂಕಲ್ಪವು ಬೇಕು. ಇದು ಇಂದು ಅಗತ್ಯವಿರುವ ನಿಜವಾದ ಪೂಜೆ.