ಬಾಗಲಕೋಟೆ: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಭಾಗವಾಗಿ ಹಮ್ಮಿಕೊಂಡಿರುವ ಪ್ರಧಾನ ಕವಿಗೋಷ್ಠಿಯಲ್ಲಿ ತಮ್ಮ ಒಪ್ಪಿಗೆ ಹಾಗೂ ಆಹ್ವಾನವೇ ಇಲ್ಲದೇ ಹೆಸರು ಬಳಸಿಕೊಂಡಿರುವುದಕ್ಕೆ ಹಿರಿಯ ಕವಿ ಡಾ.ಸತ್ಯಾನಂದ ಪಾತ್ರೋಟ ಅಸಮಾಧಾನ ಹೊರಹಾಕಿದ್ದಾರೆ.
ಅ.೩ ರಂದು ದಸರಾ ಪ್ರಯುಕ್ತ ಮೈಸೂರಿನಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದ್ದು, ಕನಿಷ್ಠ ಅವರನ್ನು ಆಹ್ವಾನಿಸಿಲ್ಲ. ಅಷ್ಟೇ ಅಲ್ಲದೇ ಅವರ ಗಮನಕ್ಕೆ ಬಾರದೆಯೇ ಅವರ ಹೆಸರನ್ನು ಪ್ರಧಾನ ಕವಿಗೋಷ್ಠಿಯಲ್ಲಿ ಬಳಸಿಕೊಂಡಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮೂರು ಬಾರಿ ಪ್ರಧಾನ ಕವಿಗೋಷ್ಠಿಯಲ್ಲಿ ತಾವು ಭಾಗವಹಿಸಿದ್ದು, ಒಂದು ಬಾರಿ ಮುಖ್ಯ ಅತಿಥಿಯಾಗಿಯೂ ಪಾಲ್ಗೊಂಡಿದ್ದೇನೆ. ಪದೇ, ಪದೆ ಕರೆದವರನ್ನೆ ಕರೆಯುವುದಕ್ಕಿಂತ ಹೊಸಬರನ್ನು ಆಹ್ವಾನಿಸಬೇಕು. ಒಪ್ಪಿಗೆ ಇಲ್ಲದೆ ಕವಿಗೋಷ್ಠಿಯಲ್ಲಿ ಭಾಗಿಯಾಗುವುದು ಆತ್ಮವಂಚನೆ ಆಗುತ್ತದೆ ಎಂದು ತಮ್ಮ ಫೇಸ್ಬುಕ್ ಪ್ರೊಫೈಲ್ ನಲ್ಲಿ ಬರೆದುಕೊಂಡಿದ್ದಾರೆ.