ಹಾವೇರಿ: ರಾಹುಲ್ ಗಾಂಧಿಯವರಿಗೆ ಆರ್ ಎಸ್ ಎಸ್ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲ. ಆರ್ ಎಸ್ ಎಸ್ ನಲ್ಲೂ ಕೂಡಾ ಮಹಿಳೆಯರ ದುರ್ಗಾ ಸೇನೆ ಇದೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಆರ್ ಎಸ್ ಎಸ್ ನಲ್ಲಿ ಮಹಿಳಾ ಕಾರ್ಯಕರ್ತರಿಲ್ಲ, ಆರ್ ಎಸ್ ಎಸ್ ಕೇವಲ ಜೈ ಶ್ರೀ ರಾಮ್ ಅನ್ನುತ್ತೆ, ಅವರಿಗೆ ಸೀತಾ ರಾಮ್ ಬೇಕಾಗಿಲ್ಲ ಎಂದು ಟೀಕೆ ಮಾಡಿದ್ದ ರಾಹುಲ್ ಗಾಂಧಿ ಹೇಳಿಕೆ ಕುರಿತು ಶಿಗ್ಗಾವಿಯಲ್ಲಿ ರವಿವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.
ನಾವು ಭಾರತೀಯರು ಎಲ್ಲರೂ ಕೂಡಾ ಭಾರತ್ ಮಾತಾಕಿ ಜೈ ಅಂತ ಹೇಳುತ್ತೇವೆ. ಭಾರತ ಮಾತೆಯೇ ನಮ್ಮ ತಾಯಿ.ತಾಯಿ ಅಂದರೆ ಕೂಡಾ ಹೆಣ್ಣೇ ಭಾರತ್ ಮಾತಾಕಿ ಜೈ ಅಂದ ಮೇಲೆನೇ ನಾವು ಕಾರ್ಯಕ್ರಮ ಪ್ರಾರಂಭ ಮಾಡತ್ತೇವೆ. ಇದನ್ನ ದಯವಿಟ್ಟು ರಾಹುಲ್ ಗಾಂಧಿಯವರಿಗೆ ತಿಳಿಸಿ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇವತ್ತು ನನ್ನ ಕ್ಷೇತ್ರದಲ್ಲಿ ಪ್ರವಾಸ ಮಾಡುವ ಮೂಲಕ ಅಭಿವೃದ್ಧಿ ಕಾಮಾಗಾರಿ ಚಾಲನೆ ಮಾಡಿದ್ದೇನೆ. ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನನ್ನ ಕ್ಷೇತ್ರದ ಜನರಲ್ಲದೆ ಬೆಳಗಾವಿ, ಹುಬ್ಬಳ್ಳಿ ಹಾಗೂ ಸುತ್ತಮುತ್ತಲಿನ ಜನರು ಅಹವಾಲು ನೀಡಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ಮಾಡುವುದು ನನ್ನ ಕೆಲಸ. ಸಂಭಂಧಪಟ್ಟ
ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಾರೆ. ನನ್ನ ಕ್ಷೇತ್ರ ಅಲ್ಲದೆ ರಾಜ್ಯದ ಜನರ ಸಮಸ್ಯೆ ಪರಿಹಾರ ಕೊಡಿಸುವ ಕಾರ್ಯ ಮಾಡುತ್ತಿದ್ದಾನೆ ಎಂದರು.
ನಾನು ಪ್ರತಿದಿನ ಜನತಾ ದರ್ಶನ ಮಾಡುವ ಮುಖ್ಯಮಂತ್ರಿ. ಕೆಲವರೆಲ್ಲಾ ವಾರಕ್ಕೊಮ್ಮೆ ಮಾಡಿ ಬಹಳ ಪ್ರಚಾರ ತಗೊಳ್ತಾರೆ. ನನಗೆ ಪ್ರತಿದಿನ ಪ್ರಚಾರದ ಅವಶ್ಯಕತೆ ಇಲ್ಲ. ನಾನು ಪ್ರತಿದಿನ ಜನರ ಸಮಸ್ಯೆ ಕೇಳಿ ಪರಿಹಾರ ಕೊಡುವ ಕೆಲಸ ಮಾಡ್ತಿದ್ದೇನೆ ಎಂದು ಹೇಳಿದರು.