ಆಣೆ ಪ್ರಮಾಣ ಮಾಡಿದ ಆರು ಜನರ ಮೇಲೆ ಎಫ್‌ಐಆರ್

ಆಣೆ
Advertisement

ಗದಗ: ಧಾರ್ಮಿಕ ಸ್ಥಳಗಳಲ್ಲಿ ಆಣೆ ಪ್ರಮಾಣ ಮಾಡಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ಆರು ಜನರ ಮೇಲೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಏಪ್ರಿಲ್ ೬ರಂದು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ರಾಮಣ್ಣ ಲಮಾಣಿ ನೇತೃತ್ವದಲ್ಲಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಸಭೆ ನಡೆಸಿ ಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಟಿಕೆಟ್‌ನ್ನು ಯಾರಿಗೆ ನೀಡಿದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ಆಣೆ ಪ್ರಮಾಣ ಮಾಡಲಾಗಿತ್ತು. ಈ ಬಗ್ಗೆ ವರದಿಯಾಗಿರುವ ಪತ್ರಿಕಾ ವರದಿಗಳ ಆಧಾರದ ಮೇಲೆ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಹಾಗೂ ಚುನಾವಣಾ ಫ್ಲಾಯಿಂಗ್ ಸ್ಕ್ಯಾಡ್ ಶಂಕರ ಹುಲ್ಲಮ್ಮನವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಎರಡು ಬಾರಿ ಶಾಸಕರಾಗಿರುವ ರಾಮಣ್ಣ ಲಮಾಣಿ ಇನ್ನೊಂದು ಬಾರಿ ಶಾಸಕರಾಗುವ ಕನಸಿನೊಂದಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸರಕಾರಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿರುವ ಡಾ.ಚಂದ್ರು ಲಮಾಣಿ, ಮೂರು ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದು ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಸೇರಿರುವ ಡಾ. ಭೀಮಸಿಂಗ್ ರಾಠೋಡ, ಗುರುನಾಥ ದಾನಪ್ಪನವರ, ರಾಜ್ಯದ ಅತೀ ಕಿರಿಯ ವಯಸ್ಸಿನ ನಗರಸಭಾಧ್ಯಕ್ಷೆ ಹೆಗ್ಗಳಿಕೆಯ ಗದಗ ನಗರಸಭೆಯ ಅಧ್ಯಕ್ಷೆ ಉಷಾ ಮಹೇಶ ದಾಸರ ಬಿಜೆಪಿ ಟಿಕೆಟ್‌ಗೆ ತೀವ್ರ ಲಾಬಿ ನಡೆಸಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರಿಂದ ಶಿರಹಟ್ಟಿ ಮತಕ್ಷೇತ್ರದ ಟಿಕೆಟ್ ಘೋಷಣೆ ಬಿಜೆಪಿ ನಾಯಕರಿಗೆ ತೀವ್ರ ತಲೆನೋವು ತಂದಿದೆ. ಈಗಾಗಲೇ ಹಾಲಿ ಶಾಸಕ ರಾಮಣ್ಣ ಲಮಾಣಿಗೆ ಟಿಕೆಟ್ ನೀಡಿದಲ್ಲಿ ಆಕಾಂಕ್ಷಿಗಳ ಪೈಕಿ ಒಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿಸಿ ಆಯ್ಕೆ ಮಾಡುವುದಾಗಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಹಿರಿಯ ಧುರೀಣ ವಿಶ್ವನಾಥ ಕಪ್ಪತ್ತನವರ ಬಹಿರಂಗ ಸಭೆ ನಡೆಸಿ ಘೋಷಿಸಿರುವುದು ಬಿಜೆಪಿ ವರಿಷ್ಠರಿಗೆ ತೀವ್ರ ತಲೆನೋವು ತಂದಿದೆ.