ಆಡಿಯೋ ವೈರಲ್: ಸ್ವಾಮೀಜಿ ಬಲಿ ಪಡೆದಿದ್ದು ತಪ್ಪು

ಬಸವಾನಂದ ಸ್ವಾಮೀಜಿ
Advertisement

ಧಾರವಾಡ: ಇಬ್ಬರು ಮಹಿಳೆಯರು ಮಾತನಾಡಿದ ಧ್ವನಿಮುದ್ರಿಕೆ ಎಲ್ಲೆಡೆ ವೈರಲ್ ಆಗಿದೆ. ಆದರೆ, ಅದು ನಿಜವೋ, ಸುಳ್ಳೋ ಎನ್ನುವುದನ್ನು ಅರಿತು ಅವರು ಮಾತನಾಡಬೇಕಿತ್ತು. ಇದರಿಂದ ಒಂದು ಜೀವ ಬಲಿ ಪಡೆದಿದ್ದು ಬೇಸರದ ಸಂಗತಿ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಆತ್ಮಹತ್ಯೆಗೆ ಶರಣಾಗಿರುವ ಸ್ವಾಮೀಜಿ ಸಮಾಜದ ಬಗೆಗೆ ಕಳಕಳಿ ಹೊಂದಿದ್ದರು. ಜೊತೆಗೆ ಹಲವಾರು ಯುವಕರಿಗೆ ದುಶ್ಚಟ ಬಿಡಿಸಿದ್ದರು. ಆದರೆ, ಯುವತಿಯರಿಬ್ಬರ ಮಧ್ಯೆ ಆಗಿರುವ ಸಂಭಾಷಣೆ ವೈರಲ್ ಆಗಿದ್ದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಸಮಾಜದ ಜನರೂ ಯಾವುದರಿಂದ ಏನಾಗುತ್ತದೆ ಎನ್ನುವುದನ್ನು ಗಮನಿಸಬೇಕು ಎಂದರು.
ಸತ್ಯಕ್ಕ 7 ಜನ ಸ್ವಾಮೀಜಿ ಹೆಸರು ಹೇಳಿದ್ದಾರೆ. ಆಕೆ 6ನೇ ತರಗತಿ ಇದ್ದಾಗಿನಿಂದ ನೋಡಿದ್ದೇನೆ. ಕಳೆದ 10 ವರ್ಷಗಳಿಂದ ನಮ್ಮ ಸಂಪರ್ಕಕ್ಕೆ ಬಂದಿಲ್ಲ. 2018ರಲ್ಲಿ ಮಠಕ್ಕೆ ಬಂದಿದ್ದಳು. ಆಗ ಆಕೆಯನ್ನು ಬೀದರ್‌ಗೆ ಕಳುಹಿಸಿಕೊಟ್ಟಿದ್ದೆ. ತಮಿಳನಾಡು ಯುವಕನ ಜೊತೆ ಮದುವೆ ಆಗಿದ್ದಳು. ಎರಡು ಮಕ್ಕಳು ಇವೆ. ಆದರೆ, ಮಾನಸಿಕವಾಗಿ ಅಸ್ವಸ್ಥಳಾಗಿದ್ದ ಆಕೆಯನ್ನು ವೈದ್ಯರ ಬಳಿ ತೋರಿಸಲಾಗಿತ್ತು. ಆದರೂ ಯಾಕೆ ಹೀಗೆ ಮಾತನಾಡಿದ್ದಾಳೆ ಎನ್ನುವುದು ತಿಳಿಯದಂತಾಗಿದೆ ಎಂದು ತಿಳಿಸಿದರು.
ರುದ್ರಮ್ಮ ಎಂಬ ಮಹಿಳೆ ಬೇಜವಾಬ್ದಾರಿ ಹೆಣ್ಣು ಮಗಳು. ಇಷ್ಟು ಜನರ ಹೆಸರು ಹೇಳುವಾಗ ಇದು ಸರಿಯೋ ತಪ್ಪೋ ಎನ್ನುವುದನ್ನು ನೋಡಬೇಕಿತ್ತು. ಯಾರೋ ಮಾಡಿದ ಆರೋಪ, ವಿಡಿಯೋ, ಆಡಿಯೋ ವೈರಲ್ ಮಾಡುವುದಕ್ಕೂ ಮುನ್ನ ಅದು ಸರಿಯೋ ತಪ್ಪೋ ಎನ್ನುವುದನ್ನು ಸಮಾಜವೂ ಗಮನಿಸಬೇಕು ಎಂದು ತಿಳಿಸಿದರು.