ಮಂಗಳೂರು: ಸೋಮೇಶ್ವರದ ಪ್ರಕಾಶ ನಗರದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಧರಾಶಾಹಿಯಾಗುವ ಹಂತದಲ್ಲಿದೆ. ತಜ್ಞರು ಇದನ್ನು ತ್ವರಿತವಾಗಿ ತೆರವು ಮಾಡಬೇಕು ಎಂದು ಶಿಫಾರಸು ಮಾಡಿದ್ದರೂ ಅಧಿಕಾರಿಗಳ ಉದಾಸೀನ, ಅವರು ಸಾರ್ವಜನಿಕರ ಸಾವಿಗಾಗಿ ಕಾಯುತ್ತಿದ್ದಾರೆಯೇ ಎಂಬ ಸಂಶಯ ಕಾಡುವಂತೆ ಮಾಡಿದೆ.
ಒಂದು ಲಕ್ಷ ಲೀಟರ್ ನೀರು ಶೇಖರಣಾ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಯಾವ ಕ್ಷಣದಲ್ಲಾದರೂ ಕುಸಿಯಬಹುದು. ಅದರ ಕಂಬಗಳು ಶಿಥಿಲವಾಗಿವೆ. ಕಬ್ಬಿಣ ತುಕ್ಕು ಹಿಡಿದಿದೆ, ಗಾರೆ ಉದುರುತ್ತಿದೆ. ಇದನ್ನು ಕೆಡಹುವುದೇ ಸೂಕ್ತ ಎಂದು ತಜ್ಞರು ವರದಿ ಮತ್ತು ಎಚ್ಚರಿಕೆ ನೀಡಿ ವರ್ಷ ಎರಡು ಕಳೆದಿದೆ. ಅಧಿಕಾರಿಗಳು “ಅದ್ಯಾರೋ ಮೂಢರು ಕೊಟ್ಟ ವರದಿ ಇರಬೇಕು’ ಎಂದು ಮೂಲೆಗೆ ಹಾಕಿದ್ದಾರೆ!.
ಮೂವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡ ಓವರ್ ಹೆಡ್ ಟ್ಯಾಂಕ್ ಇದಾಗಿದ್ದು, ಪ್ರಸ್ತುತ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ಕಂಬಗಳ ಕಾಂಕ್ರೀಟ್ ಬಿರುಕುಬಿಟ್ಟಿದೆ. ತುಕ್ಕು ಹಿಡಿದ ಕಬ್ಬಿಣದ ಸರಳುಗಳು ಗಾರೆಯಿಂದ ಹೊರಬಂದು ತಮ್ಮ ದಾರುಣ ಪರಿಸ್ಥಿತಿಯನ್ನು ಮನವರಿಕೆ ಮಾಡುತ್ತಿವೆ.
ಓವರ್ ಹೆಡ್ ಟ್ಯಾಂಕಿನ ಸ್ಥಿರತೆಯನ್ನು ಪರೀಕ್ಷಿಸಲು ಬಂದಿದ್ದ ಸುರತ್ಕಲ್ ಎನ್ಐಟಿಕೆ ತಜ್ಞರ ಸಮಿತಿ ೦೮-೦೯-೨೦೨೧ರಂದು ತನ್ನ ವರದಿ ನೀಡಿದೆ. ಸೋಮೇಶ್ವರ ಮುನ್ಸಿಪಾಲ್ಟಿಯ ಮುಖ್ಯಾಧಿಕಾರಿ ಅವರ ಲಿಖಿತ ಕೋರಿಕೆಯ ಮೇರೆಗೆ ಎನ್ಐಟಿಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಪ್ರಶಾಂತ್ ಎಂ.ಎಚ್. ಡಾ. ಪಳನಿಸಾಮಿ ೨೧-೮-೨೦೨೧ರಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅವರು ತಮ್ಮ ವರದಿಯಲ್ಲಿ ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಈ ಓವರ್ ಹೆಡ್ ಟ್ಯಾಂಕ್‌ನ ಕಂಬಗಳು, ಬೀಮ್‌ಗಳು ಶಿಥಿಲವಾಗಿವೆ. ಕೆಲವೆಡೆ ಬಿರುಕುಗಳು ಕಂಡು ಬಂದಿವೆ. ತಳಭಾಗದ ವರ್ತುಲಾಕಾರದ ಬೀಮ್‌ಗಳು ಅತ್ಯಂತ ದಾರುಣ ಸ್ಥಿತಿಯಲ್ಲಿವೆ,” ಎಂದು ದಾಖಲಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಓವರ್ ಹೆಡ್ ಟ್ಯಾಂಕ್ ಒಂದು ಲಕ್ಷ ಲೀಟರ್ ನೀರು ಶೇಖರಣೆಯ ತನ್ನ ಧಾರಣಾ ಸಾಮರ್ಥ್ಯ ಕಳೆದುಕೊಂಡಿದೆ, ಆದ್ದರಿಂದ ಯಾವ ಕ್ಷಣದಲ್ಲಾದರೂ ಕುಸಿಯಬಹುದು.
ತಜ್ಞರ ಶಿಫಾರಸು ಏನು…
ಎನ್ಐಟಿಕೆಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು ತಮ್ಮ ತಂಡದ ತಜ್ಞರು ಸಲ್ಲಿಸಿರುವ ವರದಿಯನ್ನು ಆಧರಿಸಿ “ಟ್ಯಾಂಕ್ ರಾಚನಿಕವಾಗಿ ಶಿಥಿಲಗೊಂಡಿದೆ. ಅದರ ಈಗಿನ ಪರಿಸ್ಥಿತಿಯಲ್ಲಿ ದುರಸ್ಥಿ ಸಾಧ್ಯವಿಲ್ಲ, ಇದನ್ನು ಅತ್ಯಂತ ಎಚ್ಚರಿಕೆಯಿಂದ ಕೆಡವಿ ಹಾಕುವುದೇ ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಜೀವಾಪಾಯ, ಆಸ್ತಿ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಸೂಕ್ತ ಸಾಧನ-ಸಲಕರಣೆಗಳನ್ನು, ಯಂತ್ರೋಪಕರಣಗಳನ್ನು ಹೊಂದಿರುವ ಮತ್ತು ಇಂತಹ ಎತ್ತರದ ಈ ಓವರ್ ಹೆಡ್ ಟ್ಯಾಂಕ್‌ಗಳನ್ನು ತೆರವು ಮಾಡುವ ತಜ್ಞತೆಯನ್ನು ಹೊಂದಿರುವ ಏಜೆನ್ಸಿಗಳಿಗೆ ಇದರ ತೆರವು ಕಾರ್ಯ ವಹಿಸುವುದು ಅಗತ್ಯ ಎಂದೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಶಿಫಾರಸು ಪತ್ರಕ್ಕೆ ವಿಭಾಗ ಮುಖ್ಯಸ್ಥರಾದ ಬಿ.ಆರ್. ಜಯಲಕ್ಷ್ಮೀ ಅವರು ಸಹಿ ಹಾಕಿದ್ದಾರೆ.
ಈಗ ಕಾಡುತ್ತಿರುವ ಪ್ರಶ್ನೆ..
ತಜ್ಞರು ವರದಿ, ಶಿಫಾರಸುಗಳನ್ನು ಸಲ್ಲಿಸಿ ಎರಡು ವರ್ಷ ಕಳೆದರೂ ಸ್ಥಳೀಯಾಡಳಿತ ನಿರ್ಲಕ್ಷ್ಯ ಧೋರಣೆ ತಳೆದು ಕುಳಿತಿದೆ. ಅದು ಯಾರ ಸಾವಿಗಾಗಿ ಕಾಯುತ್ತಿದೆ?. ತನ್ನ ನಾಗರಿಕರ ಆಸ್ತಿ ನಾಶ, ಜೀವ ಹಾನಿಯಾಗುವ ಕ್ಷಣಗಳಿಗಾಗಿ ಅದು ಎದುರು ನೋಡುತ್ತಿದೆಯೇ? ಅಂದ ಹಾಗೆ ಇಲ್ಲಿಗೆ ಶಾಸಕರು ವಿಧಾನ ಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್.