ಇದು ಭಂಡತನವೋ, ವೈಭವೀಕರಣವೋ ಅಥವಾ ಠೇಂಕಾರವೋ? ಎಲ್ಲಕ್ಕೂ ಹೆಚ್ಚಾಗಿ ಸವಾಲೋ…?
ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಂಗಳವಾರದ ವರ್ತನೆ ನೋಡಿದರೆ ಈ ಎಲ್ಲವೂ ಹೌದು ಎನ್ನುವುದು ಜನಸಾಮಾನ್ಯನಿಗೂ ಅನಿಸಿಯೇ ಬಿಡುತ್ತದೆ. ಭ್ರಷ್ಟಾಚಾರ ಪ್ರಕರಣದ ಆರೋಪಿ ನಂಬರ್ ಒನ್ ಆಗಿರುವ ವಿರೂಪಾಕ್ಷಪ್ಪ ಮತ್ತು ನಂಬರ್ ಟೂ ಆಗಿರುವ ಅವರ ಪುತ್ರ, ಸರ್ಕಾರಿ ಅಧಿಕಾರಿ ಅವರ ಒಟ್ಟಾರೆ ಪ್ರಕರಣ ಹಾಗೂ ಈವರೆಗಿನ ವಿದ್ಯಮಾನ ಗಮನಿಸಿದರೆ ಕರ್ನಾಟಕದ ರಾಜಕೀಯದಲ್ಲಿ ಮೆರೆಯುತ್ತಿರುವ ಕರಾಳ ದಂಧೆ'ಯ ಹತ್ತು ಹಲವು ಮುಖಗಳ ಪ್ರದರ್ಶನವಾಗುತ್ತದೆ. ವಿರೂಪಾಕ್ಷಪ್ಪ ಕೆಎಸ್‌ಡಿಎಲ್ (ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ) ಅಧ್ಯಕ್ಷರಾಗಿರುವುದು, ಅಲ್ಲಿ ಭ್ರಷ್ಟಾಚಾರಕ್ಕೆ ಮಗನನ್ನು ಬಳಸಿಕೊಂಡಿರುವುದು, ಲೋಕಾಯುಕ್ತಕ್ಕೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿರುವುದು, ಮನೆ ಶೋಧದಲ್ಲಿ ಕೋಟ್ಯಂತರ ನಗದು ಹಣ ದೊರಕಿರುವುದು... ಇದು ಸರ್ಕಾರಿ ವ್ಯವಸ್ಥೆ ಮತ್ತು ಆಡಳಿತ ಯಂತ್ರದ ಭ್ರಷ್ಟತೆಯ ತಾಂಡವ ನೃತ್ಯ ಎನ್ನುವುದು ಒಂದಾದರೆ, ನಿರೀಕ್ಷಣಾ ಜಾಮೀನು ಪಡೆದು ಕೇವಲ ಮೂರು ಗಂಟೆಯಲ್ಲಿ ವೀರೋಚಿತ ಮೆರವಣಿಗೆ ಮಾಡಿಸಿಕೊಂಡು ಮೆರೆದದ್ದು ರಾಜ್ಯದ ಭ್ರಷ್ಟ ವೈಭವೀಕರಣದ ಇನ್ನೊಂದು ಅಧ್ಯಾಯ. ಚುನಾವಣೆಯ ಹೊಸ್ತಿಲಲ್ಲಿ ನಾನಾ ಮಜಲು ಪಡೆದು, ಆರೋಪ ಪ್ರತ್ಯಾರೋಪಗಳ ವಿಜೃಂಭಣೆಯ ಪೂತ್ಕಾರಗಳೇ ಬಾಣದಂತೆ ಬತ್ತಳಿಕೆಯಿಂದ ಎಲ್ಲೆಡೆಯಿಂದ ತೂರಿ ಬರುತ್ತಿರುವಾಗ ಮಾಡಾಳು ಮೆರವಣಿಗೆ ಪ್ರತಿಪಕ್ಷದವರಿಗೆ ಟಾನಿಕ್ ಆದರೆ, ಆಡಳಿತ ಪಕ್ಷದ ಮುಖಕ್ಕೆ ಅಂಟಿದ ಕೆಎಸ್‌ಡಿಎಲ್ ಸುಗಂಧ ದ್ರವ್ಯ ತೊಳೆದು, ಕಪ್ಪು ಕಲೆ... ಕಪ್ಪಿಟ್ಟ ಸ್ಥಿತಿ !! ಬಹುಶಃ ಇದೇ ಕಾರಣಕ್ಕೆ ಮಾಡಾಳರನ್ನು ರಕ್ಷಿಸಿದವರೂ ಈಗ ಬಣ್ಣಗೇಡಿ ಮೆರವಣಿಗೆಯನ್ನು ಸಮರ್ಥಿಸಿಕೊಳ್ಳಲಾಗದ ಕಳಾಹೀನರಾಗಿದ್ದಾರೆ. ಹಾಗಾಗಿಯೇ ಉಚ್ಚಾಟನೆಯ ಬಣ್ಣವನ್ನೇನೋ ಬಳೆದಿದ್ದಾರೆ. ಬೃಹತ್ ಹಾರ ಹಾಕಿಕೊಂಡು ಕಾರಿನ ಸನ್ ಛಾವಣಿ ತೆರೆದಿಟ್ಟು ನಿಂತು ಮೈಸೂರು ಪೇಟಾ ಧರಿಸಿ, ಮೆರವಣಿಗೆ ಮಾಡುವಾಗ ಮಾಡಾಳರ ಬೆಂಬಲಿಗರು ಮತ್ತು ಅವರಲ್ಲಿಯೂ ಯುದ್ಧ ಗೆದ್ದು ಬಂದ ವೀರ ಯೋಧನ ಠೇಂಕಾರವಂತೂ ಕಂಡುಬಂತು. ಇದನ್ನು ಖಂಡಿಸಿದವರ ಮೇಲೆ ಹಲ್ಲೆಯಂತೂ ನಡೆಯಿತು. ವಿಪರ್ಯಾಸ ಎಂದರೆ ಇದನ್ನು ಸಮರ್ಥಿಸಿಕೊಂಡವರೂ ಇದ್ದಾರೆ! ಆರೋಪಿ ಮತ್ತು ಆರೋಪಿಗಳಾಗಿ ಜೈಲು ಸೇರಿ ಜಾಮೀನು ಪಡೆದ ನಂತರ ಮೆರವಣಿಗೆ ಮೂಲಕ ಅದ್ಧೂರಿ ಪ್ರದರ್ಶನ ನಡೆಸಿದ ಘಟನೆ ಇದೊಂದೇ ಅಲ್ಲ. ದೇಶಾದ್ಯಂತ ಹತ್ತಾರು ಡಾನ್‌ಗಳು, ಆರ್ಥಿಕ, ಸಾಮಾಜಿಕ ಅಪರಾಧ ನಡೆಸಿಯೂ ಬೀಗಿದವರು, ಕೊಲೆಗಡುಕರು, ರಾಜಕೀಯ ಶಕ್ತಿ ಪ್ರದರ್ಶನ ಸವಾಲು ಎದುರಿಸಿದ ಹಲವರು ಈ ಹಿಂದೆಯೂ ಮೆರವಣಿಗೆ ನಡೆಸಿದ್ದಾರೆ. ಇದೇ ರಾಜ್ಯದಲ್ಲಿ ಜೈಲಿಗೆ ಹೋಗುವಾಗಲೂ ಮೆರವಣಿಗೆಯಲ್ಲೇ ಹೋದವರು ಇದ್ದಾರೆ. ಜಾಮೀನು ಪಡೆದು ಜೈಲಿನಿಂದ ಹೊರಬಂದ ನಂತರ ನಾಯಕರು, ಜನಪ್ರತಿನಿಧಿಗಳು ಮೆರವಣಿಗೆ ಮೂಲಕ ತಮ್ಮ ಸಾಮರ್ಥ್ಯ- ಬೆಂಬಲ ಪ್ರದರ್ಶನ ಮಾಡಿದವರೂ ಇದ್ದಾರೆ. ಈ ಹಿಂದೆ ಐವತ್ತು ದಿನಗಳ ಜೈಲಿನಲ್ಲಿದ್ದು, ಜಾಮೀನು ಮೂಲಕ ಹೊರಬಂದ ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ವಿಮಾನ ನಿಲ್ದಾಣದಿಂದ ಭಾರೀ ಮೆರವಣಿಗೆಯಲ್ಲಿಯೇ ಬಂದಿರುವುದು ಜನರ ನೆನಪಿನಲ್ಲಿದೆ. ವರ್ಷಗಳ ಹಿಂದೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಹಿಂಡಲಗಾ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡಾಗ ನಡೆದದ್ದು ಅವರ ಬೆಂಬಲಿಗರ ಮೆರವಣಿಗೆ ಮೇಳ. ಹಾಗಾಗಿ ಇಂತಹ ಹತ್ತಾರು ಘಟನೆಗಳಿಗೆ ಈ ರಾಜ್ಯ- ದೇಶ ಸಾಕ್ಷಿಯಾಗಿದೆ. ಸೈದ್ಧಾಂತಿಕ ಕಾರಣಕ್ಕೆ ಜೈಲು ಸೇರಿ ಅಥವಾ ಆರೋಪಿಯಾಗಿ ಜಾಮೀನು ಪಡೆದವರ ಮೆರವಣಿಗೆ, ಪ್ರದರ್ಶನಗಳು, ಸಮಾವೇಶಗಳು ಸಾಮಾನ್ಯ. ಆದರೆ ಭ್ರಷ್ಟಾಚಾರ, ಕೊಲೆ, ದರೋಡೆ, ಹಿಂಸಾಚಾರ, ದೌರ್ಜನ್ಯಗಳನ್ನು ನಡೆಸಿ ಕಾನೂನಿನ ಸುಳಿಯಿಂದ ತಪ್ಪಿಸಿಕೊಂಡು ಜಾಮೀನು ಪಡೆದು ಅಥವಾ ನಿರಪರಾಧಿಯಾಗಿ ಹೊರಬಂದವರು ಈ ರೀತಿ ಮೆರವಣಿಗೆ ನಡೆಸುವುದು ವ್ಯವಸ್ಥೆಯ ಅಣಕದ ಜೊತೆ, ಕಾನೂನು, ನ್ಯಾಯಾಲಯ ಹಾಗೂ ಸಾಮಾಜಿಕ ಸುಭದ್ರತೆಯ ನಿಷ್ಪಕ್ಷಪಾತದ ಮೇಲಿನ ಅಪಹಾಸ್ಯ ಕೂಡ. ಇದರ ಪರಿಜ್ಞಾನ ಅತ್ಯಗತ್ಯ. ಬೆಂಗಳೂರು ವಕೀಲರ ಸಂಘ ನೇರವಾಗಿ ಈಗ ನ್ಯಾಯಾಲಯಕ್ಕೇ ಮನವಿ ಸಲ್ಲಿಸಿದೆ. ಅವರು ಎತ್ತಿರುವ ಪ್ರಶ್ನೆ ಎಂದರೆ
ಮಾಡಾಳು ವಿರೂಪಾಕ್ಷಪ್ಪನವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದಿನಬೆಳಗಾಗುವುದರೊಳಗೆ ಪ್ರಧಾನವಾಗಿ ಸ್ವೀಕರಿಸಿ, ಅದೇ ದಿನ ನಿರೀಕ್ಷಣಾ ಜಾಮೀನು ನೀಡಿರುವ ನ್ಯಾಯಾಂಗ ಪ್ರಕ್ರಿಯೆ ಬಗ್ಗೆ. ಇದು ಜನಸಾಮಾನ್ಯರ ದೃಷ್ಟಿಯಿಂದ ನ್ಯಾಯಾಂಗದ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಹುಸಿಮಾಡಿದೆಯಲ್ಲವೇ ಎನ್ನುವುದು ವಕೀಲರು ಎತ್ತಿದ ಪ್ರಶ್ನೆ. ಮಾಡಾಳರ ನಿರೀಕ್ಷಣಾ ಜಾಮೀನು ಅರ್ಜಿಯ ನಿಲುವನ್ನೇ ಜನಸಾಮಾನ್ಯರಿಗೂ ಅನ್ವಯಿಸಿ, ಒಂದೇ ದಿನದಲ್ಲಿ ಎಲ್ಲರ ಅರ್ಜಿ ವಿಜಾರಣಿಗೆ ನಿಗದಿಪಡಿಸಿ’ ಎನ್ನುವ ಕೋರಿಕೆ ಸಲ್ಲಿಸಿರುವುದರ ಹಿಂದೆ ಆಘಾತ, ಆತಂಕ ಸ್ಪಷ್ಟ. ಅಷ್ಟೇ ಅಲ್ಲ, ಲೋಕಾಯುಕ್ತ ಪೊಲೀಸರಿಗೆ ಐದು ದಿನಗಳಿಂದ ಸಿಗದ ಮಾಡಾಳು ನಿರೀಕ್ಷಣಾ ಜಾಮೀನು ದೊರೆತ ಕೆಲ ಗಂಟೆಗಳಲ್ಲಿ ಅದೇ ಊರಲ್ಲಿ ಪ್ರತ್ಯಕ್ಷನಾಗುತ್ತಾರೆಂದರೆ, ಹಾಗೂ ತಾನು ಮನೆಯಲ್ಲೇ ಇದ್ದೆ ಎನ್ನುವ ಮೂಲಕ ಇಡೀ ಲೋಕಾಯುಕ್ತಕ್ಕೆ ಮತ್ತು ಸರ್ಕಾರದ ಗೃಹ ಇಲಾಖೆಗೆ ಸವಾಲು ಹಾಕಿದಂತಾಗಿದೆ. ವ್ಯವಸ್ಥೆಯನ್ನ ಆಳುವ ಪಕ್ಷದ ಶಾಸಕನೇ ಅಣಕಿಸಿದಂತೂ ಆಗಿದೆ.
ಮಾಡಾಳು ಇಷ್ಟಕ್ಕೇ ನಿಲ್ಲದೇ ತಾನೇ ಕೆಎಸ್‌ಐಡಿಎಲ್ ಉದ್ಧಾರಕ, ನನ್ನಲ್ಲಿರುವ ಹಣ ನನ್ನ ಸ್ವಂತ ದುಡಿಮೆಯದ್ದು; ಆಸ್ತಿಪಾಸ್ತಿಯದ್ದು, ಕೃಷಿಯಿಂದ ಬಂದದ್ದು ಎನ್ನುವ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು- ಮಜಲಿನ ಮುನ್ಸೂಚನೆಯನ್ನು ನೀಡಿದ್ದಾರೆ. ಅಂದರೆ ತಮ್ಮೊಂದಿಗೆ ಪ್ರಭಾವಿ ಹಸ್ತ ಇರುವ ಸಂದೇಶ ರವಾನೆಯ ಉದ್ದೇಶ ಸ್ಪಷ್ಟ.
ಇಂತಹ ಮಾಡಾಳು ಪ್ರಕರಣ ರಾಜ್ಯಕ್ಕೆ ಹೊಸದೇನಲ್ಲ. ಈ ಹಿಂದೆಯೂ ಜನಪ್ರತಿನಿಧಿಗಳ ಮೇಲೆ ನೇರ ಹಣ ವ್ಯವಹಾರದ ಭ್ರಷ್ಟಾಚಾರದ ಆರೋಪಗಳು, ಜೊತೆಗೆ ಅತ್ಯಾಚಾರ, ಅನಾಚಾರ, ದೊಂಬಿ ಗಲಭೆಗಳ ದೂರುಗಳು ಸಾಕಷ್ಟು ಬಂದಿವೆ. ಮಾಡಾಳು ಪ್ರಕರಣ ಏಕೆ ಗಮನ ಸೆಳೆಯುತ್ತದೆ ಎಂದರೆ ಅಧಿಕಾರಿಯಾಗಿರುವ ಅವರ ಪುತ್ರನ ಮೇಲಿರುವ ಆರೋಪ, ಆತನಲ್ಲಿ ಹಾಗೂ ಆತನ ಮನೆಯಲ್ಲಿ ದೊರೆತ ಹಣ, ಮಾಡಾಳು ಮನೆಯಲ್ಲಿ ದೊರೆತ ಆಸ್ತಿ ಪಾಸ್ತಿಗಳ ಕಾರಣದಿಂದ.
ಕೇವಲ ಇಪ್ಪತೈದು ವರ್ಷಗಳ ಹಿಂದೆ ಒಬ್ಬ ಗ್ರಾಮ ಪಂಚಾಯ್ತಿ ಸದಸ್ಯ, ಆ ನಂತರ ಜಿಲ್ಲಾ ಪಂಚಾಯ್ತಿ ಸದಸ್ಯ ಈಗ ಎರಡು ಬಾರಿ ಶಾಸಕರಾಗಿ ನೂರಾರು ಕೋಟಿ ರೂಪಾಯಿ ಆಸ್ತಿ ಪಾಸ್ತಿ ಮಾಡುವುದಾದರೆ, ಈತಹ ಹುಲುಸಾದ ದಂಧೆ ಇನ್ನಾವುದಿದೆ! ಬಹುಶಃ ರಾಜಕಾರಣ ಮತ್ತು ರಾಜಕೀಯ ಕುಲಗೆಟ್ಟಿರುವುದಕ್ಕೆ ನಿಚ್ಚಳ ಉದಾಹರಣೆ. ನ್ಯಾಯವಂತರಿಂದ ರಾಜಕಾರಣ ಸಾಧ್ಯವೇ? ಸಾರ್ವಜನಿಕ ಸೇವೆ, ಸಮಾಜ, ಜನರೊದ್ಧಾರ ಎನ್ನುವುದೆಲ್ಲ ಮುಖವಾಡ ಅಷ್ಟೇ… ಇದೇ ಕಾರಣಕ್ಕೆ ಪ್ರಾಮಾಣಿಕರು, ಚಿಂತಕರು, ಯುವಕರು ರಾಜಕೀಯ ಎಂದರೆ ಜಿಗುಪ್ಸೆ, ಅಸಹ್ಯ ಪಟ್ಟುಕೊಳ್ಳುತ್ತಾರೆ. ರಾಜಕಾರಣ ಏನಿದ್ದರೂ ರಾಜಕಾರಣಿಗಳ ಕುಟುಂಬಕ್ಕಷ್ಟೇ ಸೀಮಿತ. ಅವರ ಮಕ್ಕಳು, ಬಂಧುಗಳಿಗೆ ಮಾತ್ರ. ರಾಜಕಾರಣಕ್ಕೆ ಬರುವುದೇ ಇಂತಹ ವ್ಯವಹಾರಕ್ಕಾಗಿ ಎಂಬಂತಾಗಿಬಿಟ್ಟಿದೆ. ಇದೇ ಕಾರಣಕ್ಕಾಗಿಯೇ ಜನ ಮತಗಟ್ಟೆಗಳಿಂದಲೂ ದೂರ ಇರುವುದು. ಯಾರು ಬಂದರೇನು? ನಮಗೇನು, ಎಲ್ಲರೂ ಅಷ್ಟೇ ಎನ್ನುವ ತಾತ್ಸಾರದ ಮಾತುಗಳು.
ಹಿಂದೆ ಜಯಪ್ರಕಾಶ ನಾರಾಯಣ, ಆಚಾರ್ಯ ಕೃಪಲಾನಿ, ಜಾರ್ಜ್ ಫರ್ನಾಂಡೀಸ್ ಮೊದಲಾದವರನ್ನು ತುರ್ತು ಪರಿಸ್ಥಿತಿ ನಂತರ ಜೈಲಿನಿಂದ ಬಿಡುಗಡೆಯಾದಾಗ ದೊರಕಿದ್ದು ವೀರೋಚಿತ ಸ್ವಾಗತ. ಮತ್ತು ಈ ಸ್ವಾಗತ ಹಿಂದೆ ನೈತಿಕ ಬೆಂಬಲ. ರಾಮ ಜನ್ಮಭೂಮಿ ವಿವಾದದಲ್ಲಿ ಮುರುಳಿ ಮನೋಹರ ಜೋಶಿ, ಅಡ್ವಾನಿ, ಉಮಾ ಭಾರತಿ ಅವರನ್ನೆಲ್ಲ ನ್ಯಾಯಾಲಯದ ಕಟಕಟೆಗೆ ತಂದಾಗ ದೊರೆತದ್ದು ನೈತಿಕ ಮತ್ತು ಧಾರ್ಮಿಕತೆಯ ಜೊತೆಗೆ ಹಕ್ಕೊತ್ತಾಯದ ಬೆಂಬಲ. ಹುಬ್ಬಳ್ಳಿಯ ಈದ್ಗಾ ಮೈದಾನ, ಆ ನಂತರದ ನ್ಯಾಯಾಂಗ ಸಮರದಲ್ಲಿ ಉಮಾ ಭಾರತಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಾಗ ದೊರೆತದ್ದು, ಆ ನಂತರ ಜೈಲಿನಿಂದ ಬಿಡುಗಡೆಯಾದಾಗಲೂ ರಾಜಕೀಯದ ಸೇಡು ಸೆಡವು ಇದ್ದರೂ ಜನಸಾಮಾನ್ಯರ ದೃಷ್ಟಿಯಲ್ಲಿ ನಾಡಿಗಾಗಿ, ದೇಶಕ್ಕಾಗಿ, ರಾಷ್ಟçಧ್ವಜಕ್ಕಾಗಿ, ಧರ್ಮಕ್ಕಾಗಿನ ಹೋರಾಟ. ಆದ್ದರಿಂದಲೇ ಇಂತಹ ಜನ ಬೆಂಬಲ ದೊರಕಿತ್ತು.
ಮಾಡಾಳರ ಪರವಾದ ನಿನ್ನೆಯ ಮೆರವಣಿಗೆ ಇದ್ಯಾವುದನ್ನು ಹೋಲುತ್ತದೆ?
ಹೋರಾಟ ನಡೆಸಿ ಜೈಲು ಸೇರಿ, ಜಾಮೀನಿನ ಮೇಲೆ ಬಂದಾಗ ನಡೆವ ಮೆರವಣಿಗೆ- ಪ್ರದರ್ಶನ, ಘೋಷಣೆಗಳಿಗೆ ಅರ್ಥವಿದೆ. ಇದರಲ್ಲಿ ಯಾವ ಪುರುಷಾರ್ಥವಿದೆ? ಏನು ಸಂದೇಶವನ್ನು ನಿನ್ನೆಯ ಮೆರವಣಿಗೆ ಕೊಡಲು ಹೊರಟಿದೆ.ನಾ ಖಾವೂಂಗಾ, ನಾ ಖಾನೇ ದೂಂಗಾ' ಎನ್ನುವ ಪ್ರಧಾನಿ ಘೋಷಣೆ, ಭ್ರಷ್ಟಾಚಾರ ರಹಿತ ಸರ್ಕಾರ ಎನ್ನುವ ನಾಯಕರ ಅಭಿಮಾನದ ಮಾತುಗಳು, ಇದರೊಟ್ಟಿಗೆ ಬಿಜೆಪಿ ಎಂದರೆ, ಸಿದ್ಧಾಂತ- ಸಂಸ್ಕೃತಿಯ, ಹೊಸತನದ ರಾಜಕೀಯ ಎನ್ನುವವರ ಮುಂದೆ ಮಾಡಾಳು ಪ್ರದರ್ಶನ ಯಾವ ಸಿದ್ಧಾಂತದ್ದು? ಯಾವ ಸಂಸ್ಕೃತಿಯದ್ದು ಎನ್ನುವ ಪ್ರಶ್ನೆಗಳು ಏಳುತ್ತವೆ.
ಪಾರ್ಟಿ ವಿತ್ ಡಿಫರನ್ಸ್’ ಎನ್ನುವುದು ಎಂದೋ ಮುಗಿದ..ಈಗಂತೂ ತಮಾಷೆಯ ಸ್ಲೋಗನ್ ಆಗಿದೆ.
ರಾಜಕೀಯ ಎಂದರೆ ಸಂಘರ್ಷಕ್ಕಲ್ಲ. ಸಿದ್ದಾಂತಕ್ಕೆ ಮತ್ತು ವ್ಯವಸ್ಥೆಯ ಬದಲಾವಣೆಗೆ ಎನ್ನುವವರೇ, ರಾಜಕೀಯ ಎಂದರೆ ಈಗ ಹೊಂದಾಣಿಕೆಯ, ಹಣಕಾಸಿನ, ಲಾಭ ವ್ಯವಹಾರವೀಗ.. . ತಮಾಷೆ ಎಂದರೆ ಈ ಮೆರವಣಿಗೆ ತಪ್ಪು ಎಂದು ಹೇಳುವ ಧೈರ್ಯವೂ ಯಾರೊಬ್ಬರಿಗೂ ಇಲ್ಲವಲ್ಲ! ಬದಲು ಯಾರೊಬ್ಬ ಹೇಳಿದರೆ ಆತನ ಜಾತಿ, ಕುಲ ಗೋತ್ರಗಳ ಮಾತು ಇತ್ಯಾದಿಗಳೇ ಪ್ರತಿಯಾಗಿ ಕೇಳಿ ಬರುತ್ತವೆ! ಇದಕ್ಕಾಗಿ ಮಾಡಾಳು ಹಾಗೂ ಅವರಂಥವರು ಇನ್ನೂ ಕರ್ನಾಟಕದ ರಾಜಕಾರಣದಲ್ಲಿ ವಿಜೃಂಭಿಸಿಯಾರು ಅಷ್ಟೇ…! ಜನಾಭಿಪ್ರಾಯಕ್ಕೆಲ್ಲಿದೆ ಬೆಲೆ..?