ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಲು ರಾಜ್ಯ ಕಾಂಗ್ರೆಸ್ ವಿನೂತನ ಕಾರ್ಯಕ್ರಮವನ್ನು ಹಮ್ಮಿಂಕೊಂಡಿದೆ. ‘ನಾ ನಾಯಕಿ’ ಹೆಸರಿನಲ್ಲಿ ಸಮೇವೇಶವನ್ನು ಕೆಪಿಸಿಸಿ ಹಮ್ಮಿಕೊಂಡಿದ್ದು, ಬೃಹತ್ ಸಮೇವೇಶವನ್ನು ಇಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉದ್ಘಾಟಿಸಲಿದ್ದಾರೆ.
ಪ್ರಿಯಾಂಕಾ ಅವರು ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನೀಡುವ ಭರವಸೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ನಾ ನಾಯಕಿ ಸಮಾವೇಶದಲ್ಲಿ ಪಂಚಾಯಿತಿ, ಸಹಕಾರ ಸಂಘಗಳಲ್ಲಿ ಸ್ಪರ್ಧೆ ಮಾಡಿದ ಮಹಿಳಾ ನಾಯಕಿಯರು ಭಾಗವಹಿಸಲಿದ್ದಾರೆ. ಹೆಣ್ಣು ಸಮಾಜದ ಕಣ್ಣು. ಅವರು ಒಂದು ಶಕ್ತಿಯಾಗಿದ್ದು, ಅವರ ಸಬಲೀಕರಣಕ್ಕೆ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, “ರಾಜ್ಯದ ಎಲ್ಲಾ ಮಹಿಳೆಯರನ್ನು ಗುರುತಿಸಿ ಪ್ರೋತ್ಸಾಹಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೂಪುಗೊಂಡ ವಿನೂತನ ಕಾರ್ಯಕ್ರಮವೇ ‘ನಾ ನಾಯಕಿ’. ಇಂದು ‘ನಾ ನಾಯಕಿ’ ಕಾರ್ಯಕ್ರಮ ಬೆಂಗಳೂರಲ್ಲಿ ಹಮ್ಮಿಕೊಂಡಿದ್ದು, ಪ್ರಿಯಾಂಕಾ ಗಾಂಧಿಯವರು ಪಾಲ್ಗೊಳ್ಳಲಿದ್ದಾರೆ. ನೀವೂ ಬನ್ನಿ, ಭಾಗವಹಿಸಿ” ಎಂದು ಪಕ್ಷ ಕರೆ ನೀಡಿದೆ.