ಅಭಿವೃದ್ಧಿ ವಿಚಾರ ಮರೆಮಾಚಲು ಗಡಿ ವಿಚಾರ ಮುನ್ನೆಲೆಗೆ-ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ

Advertisement

ಹುಬ್ಬಳ್ಳಿ: ‘ಅಭಿವೃದ್ಧಿ ವಿಷಯಗಳು ಇಲ್ಲದೇ ಇರುವುದರಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಬಿಜೆಪಿ ನಾಯಕರು ಗಡಿ ವಿವಾದವನ್ನು ಮುನ್ನಲೆಗೆ ತಂದಿದ್ದಾರೆ. ಒಬ್ಬರು ಅತ್ತ ಹಾಗೆ ಇನ್ನೊಬ್ಬರು ಹೊಡೆದಂತೆ ಎರಡೂ ಸರ್ಕಾರದವರು ನಾಟಕ ಮಾಡುತ್ತಿದ್ದಾರೆʼ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಶುಕ್ರವಾರ ಸಂಜೆ ಗದಗ ಜಿಲ್ಲೆ ಲಕ್ಷ್ಮೇಶ್ವರಕ್ಕೆ ತೆರಳುವ ಮುನ್ನ ನಗರದಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಗಡಿ ವಿವಾದ ಮುಗಿದ ಅಧ್ಯಾಯ. ಇದು ಗೊತ್ತಿದ್ದರೂ ಜನರು ಸರಕಾರದ ವೈಫಲ್ಯಗಳ ಬಗ್ಗೆ ಮಾತನಾಡಬಾರದು ಎಂದು ಭಾವನಾತ್ಮಕವಾಗಿ ಕೆರಳಿಸಲು ಗಡಿ ವಿವಾದ ಎಬ್ಬಿಸಿದ್ದಾರೆ. ಇದು ಬಹಳ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಆರೋಪಿಸಿದರು.
ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಮೀನಮೇಷ ಮಾಡುತ್ತಿವೆ. ಸರಕಾರ ಬರೀ ದೊಡ್ಡ ದೊಡ್ಡ ಘೋಷಣೆಗಳಿಗೆ ಸೀಮಿತವಾಗಿದೆ. ಯಾವೊಂದು ಕೆಲಸಗಳು ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.
ಜನವರಿ 3 ರಿಂದ ಕಲ್ಯಾಣ ಕರ್ನಾಟಕದಲ್ಲಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಿತ್ತೂರ ಕರ್ನಾಟಕದಲ್ಲಿ ಪಂಚರತ್ನ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕೋಲಾರ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ ಎಂದು ಹೇಳಿದರು.
ಜನಾರ್ದನರೆಡ್ಡಿ ಸೇರಿದಂತೆ ಯಾವ ನಾಯಕರೂ ಜೆಡಿಎಸ್ ಸೇರುವ ಬಗ್ಗೆ ಪಕ್ಷದೊಂದಿಗೆ ಚರ್ಚೆ ಆಗಿಲ್ಲ. ಚುನಾವಣೆಯಲ್ಲಿ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ತೆಲಂಗಾಣ ಗಡಿ ಭಾಗದಲ್ಲಿ ಜೆಡಿಎಸ್‌ಗೆ ಬೆಂಬಲ ಕೊಡುವುದಾಗಿ ಕೆ.ಸಿ ಚಂದ್ರಶೇಖರರಾವ್ ಭರವಸೆ ನೀಡಿದ್ದಾರೆ. ಈ ಬಾರಿ 123 ರಿಂದ 130 ಸೀಟ್ ಗೆಲ್ಲುವುದರೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಗುರಿ ಹಾಕಿಕೊಂಡಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿಯ ಗುಜರಾತ್ ಮಾಡೆಲ್ ವರ್ಕೌಟ್ ಆಗುವುದಿಲ್ಲ ಎಂದು ಹೇಳಿದರು.