ಬೆಳಗಾವಿ: ಜಾಧವ ನಗರದಲ್ಲಿ ಭಾನುವಾರ ಸಂಜೆ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಸರ್ಕಾರಿ ಕಾರನ್ನು ವೇಗವಾಗಿ ಓಡಿಸಿ, ರಸ್ತೆ ಬದಿಯ ಗಿಡಕ್ಕೆ ಡಿಕ್ಕಿ ಹೊಡೆದ ಘಟನೆ ಮುಂಜಾನೆ ನಡೆದಿದೆ.
ಅಪಘಾತಪಡಿಸಿದ ಬಾಲಕ ಸರ್ಕಾರಿ ಅಧಿಕಾರಿಯೊಬ್ಬರ ಪುತ್ರ ಎನ್ನಲಾಗಿದೆ. ಜಾಧವ ನಗರದ ಜೋಡಿ ರಸ್ತೆಯಲ್ಲಿ 120 ಕಿ.ಮೀ ವೇಗದಲ್ಲಿ ಬಂದ ಕಾರು ಜನರಲ್ಲಿ ಭಯ ಹುಟ್ಟಿಸಿತು. ಬಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಫುಟ್ಪಾತ್ ಮೇಲೆ ಹತ್ತಿ ಮರಕ್ಕೆ ಗುದ್ದಿತು. ಅತ್ಯಂತ ಜನನಿಬಿಡ, ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಅಪಘಾತದ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಕಾರು ಗುದ್ದಿದ ರಭಸಕ್ಕೆ ಮರ ತುಂಡಾಗಿ ಕಾರಿನ ಮೇಲೆ ಬಿದ್ದಿತು. ಕಾರ್ ಕೂಡ ಉರುಳಿ ಬಿದ್ದಿದೆ. ಬಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.