ಮಂಗಳೂರು: ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ ತಪ್ಪಿಗೆ ಆತನ ತಂದೆಗೆ ನ್ಯಾಯಾಲಯವು ಬರೋಬ್ಬರಿ ೨೦ ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೊಯಿಲದಲ್ಲಿ ನಡೆದಿದೆ.
ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆ.ಸಿ. ಫಾರ್ಮ್ ನಿವಾಸಿ ಅಬ್ದುಲ್ ರಹಿಮಾನ್ ದಂಡ ಪಾವತಿಸಿದವರು. ೨೦೨೦ನೇ ಇಸವಿಯಲ್ಲಿ ಕೊಯಿಲದಲ್ಲಿ ಅಬ್ದುಲ್ ರಹಿಮಾನ್ ಎಂಬವರು ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಲಾಯಿಸಲು ನೀಡಿದ್ದರು. ಆ ಸಮಯದಲ್ಲಿ ಬೈಕ್ ಅಪಘಾತವಾಗಿ ಅಪ್ರಾಪ್ತ ಬಾಲಕನ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಪುತ್ತೂರು ಎಸಿಜೆಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಯೋಗೀಂದ್ರ ಶೆಟ್ಟಿಯವರು ತೀರ್ಪು ನೀಡಿದ್ದಾರೆ. ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ವಾಹನವನ್ನು ನೀಡಿದ್ದ ವಾಹನ ಮಾಲೀಕರಿಗೆ ೨೦ ಸಾವಿರ ರೂ. ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾರದ ಕವಿತಾ ನ್ಯಾಯಾಲಯದಲ್ಲಿ ವಾದಿಸಿದ್ದರು.