ಬೆಳಕವಾಡಿ: ಹೆದ್ದಾರಿ ರಸ್ತೆಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಚಿರತೆಯೊಂದು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಜರುಗಿದೆ.
ತಾಲ್ಲೂಕಿನ ಬಿಜಿಪುರ ಹೋಬಳಿಯ ಮಳವಳ್ಳಿ-ಕೊಳ್ಳೇಗಾಲ ಹೆದ್ದಾರಿ ರಸ್ತೆಯ ಬಾಚನಹಳ್ಳಿ ಸಮೀಪ ಗುರುವಾರ ಸಂಜೆ 7.30ರ ಸಮಯದಲ್ಲಿ ರಸ್ತೆ ದಾಟುತ್ತಿದ್ದ ಭಾರಿ ಗಾತ್ರದ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಪೆಟ್ಟು ಬಿದ್ದು ಚಿರತೆ ಸ್ಥಳದಲ್ಲಿ ಸಾವನ್ನಪ್ಪಿದೆ ಎಂದು ವರದಿಯಾಗಿದೆ.
ಡಿಕ್ಕಿ ಹೊಡೆದ ವಾಹನ ಪರಾರಿಯಾಗಿದೆ. ರಸ್ತೆ ಬದಿಯಲ್ಲಿ ಸತ್ತು ಬಿದ್ದಿದ್ದ ಚಿರತೆಯನ್ನು ಕಂಡು ವಾಹನ ಸವಾರರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸತ್ತ ಚಿರತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ.