ಅನ್ಯಜಾತಿಯ ಯುವಕನ‌ ಜತೆಗೆ ಪ್ರೀತಿ: ಅಪ್ರಾಪ್ತೆ ಮಗಳು, ಪ್ರಿಯತಮನ ಕೊಲೆ

Advertisement

ಬಾಗಲಕೋಟೆ: ಅನ್ಯಜಾತಿಯ ಯುವಕನನ್ನು ಪ್ರೀತಿಸಿದಕ್ಕಾಗಿ ಅಪ್ರಾಪ್ತ ವಯಸ್ಸಿನ‌ ಮಗಳು ಹಾಗೂ ಆಕೆಯ ಪ್ರಿಯತಮೆಯನ್ನು ತಂದೆಯೇ ಕೊಲೆ ಮಾಡಿದ ಘಟನೆ ನಡೆದಿದೆ.

ಬೇವಿನಮಟ್ಟಿಯ ವಿಶ್ವನಾಥ ಅಶೋಕ ನೆಲಗಿ (೨೨)ಹಾಗೂ ತನ್ನ ೧೭ ವರ್ಷದ ಪುತ್ರಿಯನ್ನು ತಂದೆ ಪರಸಪ್ಪ ಕರಡಿ ಹಾಗೂ ಇತರರು ಕೂಡಿಕೊಂಡು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಸೆ.೨೮ ರಂದು ಬಹಿರ್ದೆಸೆಗೆ ತೆರಳಿದ್ದ‌ ಮಗಳು ಮರಳಿ ಮನೆಗೆ ಬಂದಿಲ್ಲ ಎಂದು ಅ.೭ರಂದು ಪರಸಪ್ಪ ಠಾಣೆಗೆ ತಿಳಿಸಿ ಆಕೆಯ ಅಪಹರಣವಾಗಿದೆ ಎಂದು ದೂರು ನೀಡಿದ್ದ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆಗೆ ಮುಂದಾದಾಗ ಪರಸಪ್ಪನೇ ಪ್ರಮುಖ ಆರೋಪಿ ಎಂಬದು ತಿಳಿದು ಬಂದಿದೆ.

ತನ್ನ ಪುತ್ರಿ ಹಾಗೂ ವಿಶ್ವನಾಥ ಇಬ್ಬರ ಪ್ರೀತಿಯನ್ನು ಒಪ್ಪಿರುವುದಾಗಿ ನಂಬಿಸಿ ನರಗುಂದಕ್ಕೆ ವಿಶ್ವನಾಥನನ್ನು ಕರೆಯಿಸಲಾಗಿದೆ. ಪುತ್ರಿಯನ್ನೂ ಅಲ್ಲಿಗೆ ಕರೆದೊಯ್ಯಲಾಗಿದ್ದು, ಇಬ್ಬರನ್ನು ಕೊಲೆ ಮಾಡಿ ಆಲಮಟ್ಟಿ- ಹುನಗುಂದ ರಾಷ್ಟ್ರೀಯ ಹೆದ್ದಾರಿ ಬಳಿ ಹರಿಯುವ ಕೃಷ್ಣಾ ನದಿಗೆ ಎಸೆಯಲಾಗಿದೆ.

ಪುತ್ರಿಯ ಕತ್ತು ಹಿಸುಕಿ‌ ಕೊಲೆ ಮಾಡಿದರೆ. ವಿಶ್ವನಾಥನ‌ ತಲೆಯನ್ನು‌ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.‌ಸಾಕ್ಷಿ ನಾಶಕ್ಕಾಗಿ ಇಬ್ಬರ ಬಟ್ಟೆಯನ್ನು ಬಿಚ್ಚಿ ನದಿಗೆ ಎಸೆದಿದ್ದಾರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಸ್ಪಿ ಜಯಪ್ರಕಾಶ ಮಾರ್ಗದರ್ಶನ, ಡಿಎಸ್ಪಿ ಪ್ರಶಾಂತ ಮುನೋಳಿ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಸಿಪಿಐ ಭೀಮಣ್ಣ ಸೋರಿ, ಪಿಎಸ್ ಐ ಜನಾರ್ಧನ ಭಟ್ರಳ್ಳಿ ಹಾಗೂ ಸಿಬ್ಬಂದಿಯಿದ್ದ ತಂಡ ತನಿಖೆ ಕೈಗೊಂಡು ಆರೋಪಿಗಳಾದ ರವಿ ದುಂಡಪ್ಪ ಹುಲ್ಲನ್ನವರ, ಹನುಮಂತ ಸಿದ್ದಪ್ಪ ಮಲ್ಲಾಡದ, ಬೀರಪ್ಪ ಯಲ್ಲಪ್ಪ ದಳವಾಯಿ ಅವರಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇತರ ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ.