ಅನೈತಿಕತೆಯ ಸಾಮ್ರಾಜ್ಯದಲ್ಲಿ ನೈತಿಕತೆ ಶೋಧಕ್ಕೆ ದುರ್ಬೀನು

ಮೋಹನ ಹೆಗಡೆ
Advertisement

ಆಗಸ್ಟ್ 31ರಂದು ಪೋರ್ಚುಗಲ್ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಕಾರಣ ಇಷ್ಟೇ. ಮೂವತ್ತೊಂದು ವಾರಗಳ ಗರ್ಭಿಣಿ, ಭಾರತದ ಪ್ರವಾಸಿಗೆ ನೋವು ಕಾಣಿಸಿಕೊಂಡಿತು. ಅವರಿಗೆ ತುರ್ತು ಚಿಕಿತ್ಸೆ ಮತ್ತು ಪ್ರಸೂತಿ ಸೇವೆ ಅಲ್ಲಿಯ ಸಾಂಟಾ ಮಾರಿಯಾ ಆಸ್ಪತ್ರೆಯ ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರಿಂದ ಸಿಗಲಿಲ್ಲ. ಸಾವೋ ಫ್ರಾನ್ಸಿಸ್ ಕ್ಸೇವಿಯರ್ ಆಸ್ಪತ್ರೆಗೆ ಆಕೆಯನ್ನು ಸಾಗಿಸುವಾಗ ಅವರು ಮೃತಪಟ್ಟರು. ಓರ್ವ ಮಹಿಳೆಗೆ ಪೋರ್ಚು ಗಲ್‌ನಲ್ಲಿ ಚಿಕಿತ್ಸೆ ನೀಡಲಾಗಿಲ್ಲ ಎಂಬ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಮಾರ್ಟಾ ಟೆಮಿಡೋ ರಾಜೀನಾಮೆ ನೀಡಿದರು. ಹಾಗಂತ ಸಚಿವೆಯ ನೇರ ಪಾತ್ರವೇನೂ ಇದರಲ್ಲಿ ಇರಲಿಲ್ಲ. ನಿರ್ಲಕ್ಷ್ಯವಿಲ್ಲ. ಆದರೆ ತುರ್ತು ಚಿಕಿತ್ಸೆಯನ್ನು ತಾತ್ಕಾಲಿಕ ಸ್ಥಗಿತಕ್ಕೆ ನಿರ್ಣಯ ತೆಗದುಕೊಂಡಿದ್ದು ಆರೋಗ್ಯ ಇಲಾಖೆ. ಅಷ್ಟೇ.
ಇದೇ ಆಗಸ್ಟ್- ಸೆಪ್ಟೆಂಬರ್ ತಿಂಗಳುಗಳಲ್ಲಿ ಕರ್ನಾಟಕದಲ್ಲಿಯೇ ಕಲಘಟಗಿ, ಕೋಲಾರ, ಮಂಗಳೂರು ಮತ್ತು ಬೆಂಗಳೂರು ನಗರದಲ್ಲಿಯೇ ಪ್ರಸೂತಿ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಅಥವಾ ಮಗು ಸಾವನ್ನಪ್ಪಿದ್ದಾರೆ.
ಇದು ಭಾರತದಲ್ಲಿ ನಿತ್ಯದ ಘಟನೆ. ನಿತ್ಯ ಸಾಯುವವರಿಗೆ ಅಳುವವರಾರು ಎನ್ನುವಂತೆ ಭಾರತದ ಆಡಳಿತ, ಇಲ್ಲಿಯ ಹಗರಣ, ಸಾವು ನೋವುಗಳಿಗೆ ಇದು ಅಸಹಜ ಅಥವಾ ವಿಶೇಷ ಎನಿಸುವುದಿಲ್ಲ. ಆಳುವವರಿಗಂತೂ ನೈತಿಕತೆಯ ಕೆನೆಪದರವೂ ತಿಳಿಯದ ಸ್ಥಿತಿ. ವಿದೇಶಿ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗದೇ ಸಾವನ್ನಪ್ಪಿದ್ದು ಪೋರ್ಚುಗಲ್‌ನಲ್ಲಿ ರಾಷ್ಟ್ರೀಯ ಗೌರವ, ಘನತೆಯ ಪ್ರಶ್ನೆ.
ಹಾಗಂತ, ಸಚಿವೆ ಮಾರ್ಟಾ ಟೊಮಿಡೋ ಅಸಹಾಯಕ, ಅನುಪಯುಕ್ತ ಸಚಿವೆಯಾಗಿರಲಿಲ್ಲ. ಕಳೆದ ಕೋವಿಡ್ ಸಮಯದಲ್ಲಿ ಅತ್ಯಂತ ಜವಾಬ್ದಾರಿಯಿಂದ, ಅಷ್ಟೇ ಸಮರ್ಥವಾಗಿ ಕಾರ್ಯನಿರ್ವಹಿಸಿದವರು. ದೇಶದ ಜನರ ಆರೋಗ್ಯವನ್ನು ಕಾಪಾಡಿದ ಸಚಿವೆ ಎಂಬ ಹೆಗ್ಗಳಿಕೆ ಅವರದ್ದು. ತನ್ನ ಆರೋಗ್ಯವನ್ನೂ ಮರೆತು ಕೋವಿಡ್-19 ನಿಯಮಗಳನ್ನು ಎಲ್ಲೆಡೆ ಪಾಲನೆಯಾಗುವಂತೆ ಮತ್ತು ಅತ್ಯುತ್ತಮ ಚಿಕಿತ್ಸೆ ಜನಸಾಮಾನ್ಯರಿಗೂ ದೊರೆಯುವಂತೆ ನೋಡಿಕೊಂಡಿ ಮಹಿಳೆ.
ಭಾರತದ ಪ್ರವಾಸಿ ಮಹಿಳೆ ಸಾವನ್ನಪ್ಪಿರುವುದಕ್ಕೆ ಅಲ್ಲಿಯ ಯಾವ ವೈದ್ಯರ ನಿರ್ಲಕ್ಷ್ಯವೂ ಇರಲಿಲ್ಲ. ವ್ಯವಸ್ಥೆಯಲ್ಲಿನ ಲೋಪ-ಲಂಚ-ರುಷುವತ್ತು-ಹಗರಣಗಳ್ಯಾವುವೂ ಇರಲಿಲ್ಲ. ನವಜಾತ ಶಿಶುವಿಗೆ ಹಾಸಿಗೆ ಲಭ್ಯವಿರಲಿಲ್ಲ ಎನ್ನುವ ಕಾರಣಕ್ಕೆ ಬೇರೆ ಆಸ್ಪತ್ರೆಗೆ ಮಹಿಳೆಯನ್ನು ಸ್ಥಳಾಂತರಿಸಿದ್ದು ಆಸ್ಪತ್ರೆಯ ಆಡಳಿತ. ಸಚಿವೆಯಲ್ಲ.
ಈಗ ಭಾರತದಲ್ಲಿ ಆಸ್ಪತ್ರೆಗಳೇ ಮೃತ್ಯುಕೂಪವಾ ಗುತ್ತಿರುವಾಗ, ವೈದ್ಯರು-ಸಿಬ್ಬಂದಿ ಯಮಕಿಂಕರ ರಾಗಿರುವಾಗ, ಆಸ್ಪತ್ರೆಗಳು ಭ್ರಷ್ಟಾಚಾರದ ಕೂಪಗಳಾಗಿರುವಾಗ, ಜನಪ್ರತಿನಿಧಿಗಳೇ ನೇರವಾಗಿ ಹಗರಣಗಳಲ್ಲಿ ಪಾಲ್ಗೊಂಡಿರುವಾಗ ಪೋರ್ಚುಗಲ್ ಸಚಿವೆಯ ರಾಜೀನಾಮೆ ಇಲ್ಲಿ ಬಹುಶಃ ನಗೆಪಾಟಿಲಿನದ್ದು ಅಲ್ಲವೇ?
ಪೋರ್ಚುಗಲ್ ಸಚಿವೆಯ ರಾಜೀನಾಮೆ ನಮಗೇನೂ ಅನ್ನಿಸುವುದೇ ಇಲ್ಲ. ಬಳ್ಳಾರಿ ವಿಮ್ಸ್‌ನಲ್ಲಿ ವೆಂಟಿಲೇಟರ್-ವಿದ್ಯುತ್ ಸ್ಥಗಿತಗೊಂಡು ನಾಲ್ವರು ಸಾವನ್ನಪ್ಪಿರುವಾಗ, ಕರ್ನಾಟಕ ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿದರೆ ಒಂದು ರೀತಿಯ ವ್ಯಂಗ್ಯ-ತಮಾಷೆಯಂತೆ ಕಂಡೀತಲ್ಲವೇ? ಮುಂಬೈನ ಆಸ್ಪತ್ರೆಯಲ್ಲಿ ಬೆಂಕಿ ತಗುಲಿ ಹನ್ನೊಂದಕ್ಕೂ ಹೆಚ್ಚು ಶಿಶುಗಳು ಸಾವನ್ನಪ್ಪಿದವು. ಸಕಾಲಕ್ಕೆ ಚಿಕಿತ್ಸೆ ದೊರೆಯದೇ, ವೈದ್ಯರು ಗಮನಿಸದೇ, ಅನನುಭವಿಗಳ ಮತ್ತು ನಕಲಿ ವೈದ್ಯರುಗಳಿಂದ ಶಸ್ತ್ರ ಚಿಕಿತ್ಸೆ ಮತ್ತು ಔಷಧಿ ಪಡೆದು ಸಾಯುತ್ತಿರುವವರ ಸಂಖ್ಯೆ ದೇಶಾದ್ಯಂತ ನಿರಂತರವಾಗಿರುವಾಗ ಯಾರಿಗೆ ನೈತಿಕತೆಯ ಪಾಠ ಹೇಳುವುದು?
ಈ ದೇಶದಲ್ಲಿ ರೋಗ ನಿಯಂತ್ರಣಕ್ಕಿಂತ, ಹೊಸ ಹೊಸ ರೋಗಗಳು ಇನ್ನಷ್ಟು ಬರಲಿ ಎನ್ನುವ ಅಪೇಕ್ಷೆ ಪಡುವವರೇ ಹೆಚ್ಚು. ಯಾವುದರಲ್ಲಿ ಸ್ಕ್ಯಾಂಡಲ್ ಆಗಿಲ್ಲ ಎನ್ನುವುದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯನ್ನು ಗಮನಿಸಬೇಕು. ಮಕ್ಕಳ ವ್ಯಾಕ್ಸೀನ್‌ನಿಂದ ಹಿಡಿದು ಹೆಪಟೈಟಿಸ್- ಬಿ ಲಸಿಕೆಯವರೆಗೆ, ಏಯ್ಡ್ಸ್ ಔಷಧಿಯಿಂದ ಹಿಡಿದು ಈಗೀಗ ಬಂದಿರುವ ಕೊರೊನಾ ಲಸಿಕೆಯವರೆಗೆ, ಸೂಜಿಯಿಂದ ಹಿಡಿದು ಸಿಟಿ ಸ್ಕ್ಯಾನ್- ವೆಂಟಿಲೇಟರ್ ಇಂತಹ ಯಂತ್ರೋಪಕರಣಗಳ ಖರೀದಿವರೆಗೆ, ಎಲ್ಲ ರಾಜ್ಯಗಳಲ್ಲಿ ಹಗರಣಗಳಾಗಿವೆ.
ನಾ ಖಾವುಂಗಾ- ನಾ ಖಾನೆ ದೂಂಗಾ ಎನ್ನುವ ಪ್ರಧಾನ ಮಂತ್ರಿಗಳ ನೇರ ಸುಪರ್ದಿಯಲ್ಲಿರುವ ಪ್ರಧಾನಮಂತ್ರಿ ಕ್ಷೇಮ ನಿಧಿಯಲ್ಲಿ ರಾಜ್ಯ ಸರ್ಕಾರಗಳು ಖರೀದಿಸಿರುವ ವೆಂಟಿಲೇಟರ್- ಉಪಕರಣಗಳು ಕೂಡ ಗುಣಮಟ್ಟದಲ್ಲಿ ಕಳಪೆ ಇರುವ ಹಾಗೂ ಡೀಲಿಂಗ್ ಮೂಲಕ ಖರೀದಿಸಲಾಗಿದೆ ಎನ್ನುವ ಟೀಕೆಗಳಿವೆ. ಕೊರೊನಾ ವೇಳೆ ಹಾಸಿಗೆ, ದಿಂಬು, ಪಿಪಿಇ ಕಿಟ್ಸ್, ವೈದ್ಯ ಶುಲ್ಕ, ಆಹಾರ ಎಲ್ಲವುಗಳಲ್ಲಿಯೂ ಹಗರಣಗಳೇ. ಕೋವಿಡ್ ನಿಯಮ ಪಾಲನೆಯ ನೆಪದಲ್ಲಿ ಶೋಷಣೆ ದೇಶಾದ್ಯಂತ ನಡೆಯಿತು. ಕೊನೆಗೆ ಸತ್ತವರ ಕಡೆಯವರು ಸ್ಮಶಾನದಲ್ಲಿ ಚಿತೆಗೆ ಅರ್ಪಿಸಲೂ ಲಂಚ ರುಷುವತ್ತು ನೀಡಬೇಕಾಯಿತು. ಇಂತಹ ಸ್ಥಿತಿಯಲ್ಲಿ ರಾಜೀನಾಮೆ ನಿರೀಕ್ಷೆ ಅಪಹಾಸ್ಯವಲ್ಲವೇ? ಕೊರೊನಾ ರೋಗ ಜನರ ಜೀವನದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟು ಮಾಡಿದೆ. ಜನರ ಬದುಕು ಮತ್ತು ಆರ್ಥಿಕತೆ ಕುಸಿಯಿತು. ಆದಾಗ್ಯೂ ರೋಗದ ನೆಪದಲ್ಲಿ ಸಾಕಷ್ಟು ಹಣ ಗಳಿಸಿದವರು ಇದ್ದಾರೆ. ಕೊರೊನಾ ಹಲವರನ್ನು, ಕೆಲ ವರ್ಗದವರನ್ನು, ವೈದ್ಯಕೀಯ ದಲ್ಲಾಳಿ ಗಳನ್ನು, ಕೆಲ ಪೂರೈಕೆದಾರರನ್ನು ಶ್ರೀಮಂತಗೊಳಿಸಿದೆ. ಅದೂ ಕೂಡ ಏಕಾಏಕಿ ! ಇನ್ನಷ್ಟು ಕೊರೊನಾ ಹಬ್ಬಲಿ ಎಂದು ಬಯಸುವ ವರ್ಗವೂ ಹುಟ್ಟುಕೊಂಡಿದೆ !! ಸರ್ಕಾರ ಕೊರೊನಾ ಹಬ್ಬ ಆಚರಿಸುವಷ್ಟು ಉತ್ಸುಕತೆಯನ್ನು ತೋರಿದ್ದು ಇಲ್ಲಿನ ಪರಿಸ್ಥಿತಿ. ಬ್ರಿಟನ್ ಆರೋಗ್ಯ ಸಚಿವರು ಲಾಕ್‌ಡೌನ್ ಮತ್ತು ಕೊರೊನಾ ಅವಧಿಯಲ್ಲಿ ತಮ್ಮ ಸಿಬ್ಬಂದಿಗೆ ಕಿಸ್ ನೀಡಿದರೆಂಬ ಕಾರಣಕ್ಕೆ ರಾಜೀನಾಮೆ ನೀಡಿದರು. ಆದರೆ ನಮ್ಮಲ್ಲಿ? ಬಳ್ಳಾರಿ ವಿಮ್ಸ್ ಐಸಿಯು ಘಟಕದಲ್ಲಿ ವಿದ್ಯುತ್ ಸ್ಥಗಿತ, ವೆಂಟಿಲೇಟರ್ ಕಾರ್ಯನಿರ್ವಹಿಸದೇ ಮೂವರು ಸಾವನ್ನಪ್ಪಿರುವ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಘಟನೆಯನ್ನು ಆದಷ್ಟು ಮುಚ್ಚಲು ಪ್ರಯತ್ನಿಸಲಾಯಿತೇ ವಿನಾ, ಸುಧಾರಿಸುವ ಅಥವಾ ತಮ್ಮಿಂದ ಲೋಪವಾಗಿದೆ ಎಂದು ಅರಿತುಕೊಳ್ಳುವ ಕನಿಷ್ಟ ಪ್ರಜ್ಞೆಯನ್ನೂ ತೋರಿಸಲಿಲ್ಲ. ಏಕೆಂದರೆ ಇಲ್ಲಿ ಇದು ಮಾಮೂಲು. ಇಲ್ಲಿನ ಆಸ್ಪತ್ರೆಗಳ ದುರವಸ್ತೆಯಿಂದಾಗಿ ನೂರಾರು ಜನ ಸಾಯುತ್ತಿದ್ದಾರೆ. ಕೆಲವಷ್ಟೇ ಬಯಲಿಗೆ ಬರುತ್ತವೆ. ವಿಮ್ಸ್ ಒಂದೇ ಅಲ್ಲ. ರಾಜ್ಯದ ಮತ್ತು ದೇಶದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರು ಕಾಣುವುದೇ ಅಪರೂಪ. ಬಳ್ಳಾರಿ ವಿಮ್ಸ್‌ನಲ್ಲಿ ನಡೆದದ್ದೂ ಅಷ್ಟೇ. ಐಸಿಯು ಸ್ಥಗಿತಗೊಂಡಿರೂ ವೈದ್ಯರೇ ಬಂದಿ ರಲಿಲ್ಲ. ಕೆಳ ಹಂತದ ಸಿಬ್ಬಂದಿಗೆ ಐಸಿಯು ವಹಿಸಿ ತಾವು ಅನ್ಯ ಕಾರ್ಯದಲ್ಲಿ ನಿರತರಾಗಿರು. ಇದು ವಿಮ್ಸ್, ಹುಬ್ಬಳ್ಳಿಯ ಕಿಮ್ಸ್, ಕಾರವಾರದ ಕ್ರಿಮ್ಸ್, ಬೆಂಗಳೂರಿನ ವೈದ್ಯ ಕಾಲೇಜುಗಳಲ್ಲಿಯ ಸ್ಥಿತಿ. ಕರ್ನಾಟಕದ ಆರೋಗ್ಯ ಸಚಿವರು ಸ್ವತಃ ವೈದ್ಯರು. ಇವರಿಗೆ ಎಲ್ಲವೂ ಗೊತ್ತಿರುವುದರಿಂದಲೇ ಅವರು ಪೋರ್ಚುಗಲ್ ಆರೋಗ್ಯ ಸಚಿವರ ರೀತಿ ನೈತಿಕತೆ ಪ್ರದರ್ಶಿಸಲಿಲ್ಲ! ಒಂದು ವರ್ಷದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಒಂದು ಸಮೀಕ್ಷೆ ನಡೆಸಿತು. ಇದರ ಪ್ರಕಾರ, ಭಾರತದಲ್ಲಿ ಇಂದಿಗೂ ದಿನಕ್ಕೆ ಎಂಟು ನೂರಕ್ಕೂ ಹೆಚ್ಚು ಗರ್ಭಿಣಿಯರು ಅಥವಾ ನವಜಾತ ಶಿಶುಗಳು ಪ್ರಸೂತಿ ವೇಳೆ ಸಾವನ್ನಪ್ಪುತ್ತಿವೆ. ಒಂದು ವರ್ಷಕ್ಕೆ ನಾಲ್ಕು ಲಕ್ಷಕ್ಕೂ ಹೆಚ್ಚು ಗರ್ಭಪಾತಗಳು ಈ ದೇಶದಲ್ಲಿ ಸಂಭವಿಸುತ್ತಿವೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ವೇಳೆ ಸಾವನ್ನಪ್ಪುತ್ತಿದ್ದಾರೆ. ಭ್ರೂಣ ಲಿಂಗ ಪತ್ತೆ ನಿಷೇಧ ಇಲ್ಲಿಯ ಕಾನೂನು. ಹಾಗಂತಲೇ ವರ್ಷ ಲಕ್ಷಾಂತರ ಮಂದಿ ಗರ್ಭಾವಸ್ಥೆಯಲ್ಲಿಯೇ ಹುಟ್ಟುವ ಮಗುವಿನ ಲಿಂಗ ಯಾವುದೆಂದು ಪತ್ತೆ ಹಚ್ಚಿ ಬೇಡವಾದರೆ ಹೊಸಕಿ ಹಾಕುತ್ತಾರೆ. ಸರ್ಕಾರಗಳು ಅಲ್ಲಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದಾಳಿ ಮಾಡಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಹೇಳುತ್ತಿರುತ್ತವೆ. ಇನ್ನು ಖಾಸಗಿ ಆಸ್ಪತ್ರೆಯ ಲೂಟಿಯನ್ನು ನಿಯಂತ್ರಿಸುವ ಕೈಗಳಂತೂ ನಿಷ್ಕ್ರಿಯವಾಗಿ ಎಲ್ಲವೂ ಮಿಲಾಪಿಯಾಗಿ ಕೆಲಸ ಮಾಡುತ್ತಿವೆ. ಇದರೊಟ್ಟಿಗೆ ವಿಮಾ ಕಂಪನಿಗಳು, ಮೆಡಿಸಿನ್ ಕಂಪನಿಗಳು ಸೇರಿಕೊಂಡು ದೊಡ್ಡ ದೊಡ್ಡ ಸ್ಕ್ಯಾಂಡಲ್ ಬೇರೆ. ಡೋಲೊ 650 ಹಗರಣ ಯಾವ ಬೊಫೋರ್ಸ್, ರಫೆಲ್‌ಗಿಂತ ಕಡಿಮೆಯೇನಲ್ಲ. ಅವಾದರೆ ಬಳಸಿದರಷ್ಟೇ ಪ್ರಾಣ ಹೋದೀತು. ಇದಾದರೆ ಹಾಗಲ್ಲ. ಕಟ್ಟಕಡೆಯ ವ್ಯಕ್ತಿಯಿಂದ ಹಿಡಿದು ಪ್ರತಿಯೊಬ್ಬರಿಗೂ ಮಾರಕ. ರೈಲು ದುರಂತದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ರಾಜೀನಾಮೆ ನೀಡಿರು. ಇತ್ತೀಚೆಗೆ ಕೇಳಿ ಬರುತ್ತಿರುವ ಮಾತೆಂದರೆಶಾಸ್ತ್ರಿಯವರಿಗೆ ತಲೆ ಕೆಟ್ಟಿತ್ತು; ಆಡಳಿತ ನಿರ್ವಹಿಸುವುದು ಗೊತ್ತಿರಲಿಲ್ಲ; ಎಲ್ಲೋ ಅಪಘಾತವಾದರೆ ಇವರು ರಾಜೀನಾಮೆ ನೀಡಬೇಕಿತ್ತೇ ಎಂದು.
ಈಗ ಕೇಳಿ ಬರುವ ಮೌಲ್ಯದ ಮಾತು. ಈಗ ತಮ್ಮದಲ್ಲದ ಕಾರಣಕ್ಕೆ ಯಾರಾದರೂ ಅಧಿಕಾರಿ ಅಥವಾ ಜನಪ್ರತಿನಿಧಿ ರಾಜೀನಾಮೆ ಕೊಡುತ್ತಾರೆನ್ನಿ,ಇವನೊಬ್ಬ ಲಾಲ್ ಬಹದ್ದೂರ ಶಾಸ್ತ್ರಿಯಾಗಲು ಹೊರಟಿದ್ದಾನೆ ಮಾಹಾ ಎನ್ನುವ ಕೊಂಕು ಕೇಳಿಬರುತ್ತದೆ.
ನಿಜ. ಪೋರ್ಚುಗಲ್ ಆರೋಗ್ಯ ಸಚಿವೆ ರಾಜೀನಾಮೆ ಕೊಟ್ಟಿಕ್ಕೆ ಆ ದೇಶದಲ್ಲಿ ಅವರಿಗೆ ಮೆಚ್ಚುಗೆ ವ್ಯಕ್ತವಾದೀತು. ಆದರೆ ನಮ್ಮ ದೇಶದಲ್ಲಿ? ಅಯ್ಯೋ ಇದಕ್ಕೂ ರಾಜೀನಾಮೆ ಕೊಡುತ್ತಾರೆಯೇ ಎನ್ನುವ ಪ್ರಾಸಬದ್ಧ ಟೀಕೆ-ಅಪಹಾಸ್ಯವನ್ನು ಕೇಳಬೇಕಾಗುತ್ತದೆ. ಅನೈತಿಕತೆಯನ್ನೇ ಉಸಿರಾಗಿಸಿಕೊಂಡವರಿಗೆ ನೈತಿಕತೆಯ ಮೌಲ್ಯ ಎಲ್ಲಿ ಅರ್ಥವಾದೀತು ಅಲ್ಲವೇ?