ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ

Advertisement

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ವಿಧಾನಸೌಧದ ಗ್ರಾಂಡ್ ಸ್ಟೆಪ್ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸಿದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದರು. 15 ನೇ ವಿಧಾನಮಂಡಲ ಅಧಿವೇಶನಕ್ಕೆ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಭಾಷಣ ಪ್ರಮುಖ ಅಂಶಗಳು ಇಲ್ಲಿವೆ.
ನನ್ನ ಸರ್ಕಾರವು ರೈತರು, ಕಾರ್ಮಿಕರು, ಬಡವರು, ದುರ್ಬಲರು, ಅವಕಾಶ ವಂಚಿತರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬದ್ಧವಾಗಿದೆ. ಅಭಿವೃದ್ಧಿ ಪಥದಲ್ಲಿ ರಾಜ್ಯ ಮುಂಚೂಣಿಯಾಗಿ ದಾಪುಗಾಲಿಡುತ್ತಿದೆ. ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಮಾದರಿಯನ್ನು ಸರ್ಕಾರ ಅನುಸರಿಸುತ್ತಿದೆ. ಮೋದಿಯವರು ಮುಂದಿನ 25 ವರ್ಷಕ್ಕೆ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ ರಾಜ್ಯವು ಕ್ರಮಿಸುವ ವಿಶ್ವಾಸ ಇದೆ. ರೈತ ಮತ್ತು ಅವನ ಕುಟುಂಬ ಸದೃಢಗೊಳಿಸಲು ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ರೈತ ವಿದ್ಯಾನಿಧಿ ಯೋಜನೆ ರೈತರು, ನೇಕಾರರು, ಕೃಷಿ ಕಾರ್ಮಿಕರು, ಮೀನುಗಾರರಿಗೆ ವಿಸ್ತರಿಸಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ 484 ಕೋಟಿ ರೂ. ವಿದ್ಯಾರ್ಥಿ ವೇತನ ಕೊಡಲಾಗಿದೆ. ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆಗೆ 250 ರೂ. ಡೀಸೆಲ್ ಸಹಾಯಧನ, 750 ಅಮೃತ ರೈತ, ಮೀನುಗಾರರ, ನೇಕಾರರ ಉತ್ಪಾದಕ ಸಂಸ್ಥೆಗಳ ರಚನೆಗೆ ನೋಂದಣಿ, ಗೋಸಂಪತ್ತಿನ ರಕ್ಷಣೆಗೆ ಗೋಹತ್ಯಾ ತಡೆ ಕಾಯ್ದೆ ತರಲಾಗಿದೆ. 100 ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಪುಣ್ಯಕೋಟಿ ದತ್ತು ಯೋಜನೆ ತರಲಾಗಿದೆ. ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣಕ್ಕೆ 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ. ಮತ್ಸ್ಯಸಂಪದ ಯೋಜನೆ ಮೂಲಕ ಮೀನುಗಾರರಿಗೆ 2758 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ 15,066 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ವಿತರಣೆ, 29,638 ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿದರದಲ್ಲಿ 1,215 ಕೋಟಿ ರೂ. ಸಾಲ ಕೊಡಲಾಗಿದೆ ಎಂದು ತಿಳಿಸಿದರು.
ರಾಜ್ಯಪಾಲರು ಭಾಷಣದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳದ ಬಗ್ಗೆ ಮಾತನಾಡಿದರು. ಸರ್ಕಾರದ ಸಾಧನೆ, ಯೋಜನೆಗಳಿಗೆ ಸಂಬಂಧಿಸಿದಂತೆ 34 ಪುಟಗಳ ಭಾಷಣ ಪುಸ್ತಕವನ್ನು ರಾಜ್ಯಪಾಲರು ಓದಿದರು.