ಅದ್ಭುತ ಪ್ರೇಮದ ಮಾದರಿ

ಗುರುರಾಜ ಕರಜಗಿ
Advertisement

ಪೂಜ್ಯ ಹರಿಪ್ರಸಾದ ಸ್ವಾಮಿಯವರ ಪ್ರೀತಿಯ ನೂಲು ತುಂಬ ಉದ್ದವಾದದ್ದು ಮಾತ್ರವಲ್ಲ, ಅತ್ಯಂತ ಗಟ್ಟಿಯಾದದ್ದು. ಒಮ್ಮೆ ಸುತ್ತಿಕೊಂಡರೆ ಬಿಡಿಸಿಕೊಳ್ಳುವುದು ಕಷ್ಟ.
ಅವರೊಂದಿಗೆ ಊಟಮಾಡಿ ಹೊರಗೆ ಬಂದ ಮೇಲೆ ಸ್ವಾಮೀಜಿಯವರ ಬಲಗೈಯಾಗಿದ್ದ ಪ್ರೇಮಸ್ವರೂಪ ಸ್ವಾಮಿಯವರು, “ನೋಡಿ ಕರ್ಜಗಿ ಸಾಹೇಬ, ಇಂದು ಸಾಯಂಕಾಲ ಗುರುಗಳ ಪ್ರವಚನವಿದೆ. ನೀವು ಬರಬೇಕು. ಪ್ರವಚನದ ಮೊದಲು ನೀವು ಗುರುಗಳಿಗೆ ಹಾರ ಸಮರ್ಪಿಸಬೇಕು” ಎಂದರು. ಪ್ರವಚನ ಕೇಳುವುದು, ಹಾರ ಸಮರ್ಪಿಸುವುದು ಎರಡೂ ಸಂತೋಷದ ಕಾರ್ಯಗಳೇ. ಆದರೆ ಉಪನ್ಯಾಸ ಯಾವ ಭಾಷೆಯಲ್ಲಿ? ಅದು ಗುಜರಾತಿಯಾದರೆ ನನಗೆ ತಿಳಿಯಲಾರದು. ಆದರೆ ಪ್ರಪಂಚದ ಅನೇಕ ಭಾಷೆಯ ಜನರೊಂದಿಗೆ ವ್ಯವಹರಿಸಿದ ನನಗೆ ಭಾಷೆಗಿಂತ, ಅವರ ದೇಹಭಾಷೆಯಿಂದಲೇ ಹೆಚ್ಚು ಅರ್ಥ ಮಾಡಿಕೊಳ್ಳುವ ನಂಬಿಕೆ ಇತ್ತು. ಆಗಲಿ ಎಂದು ನನ್ನ ಕೋಣೆಯತ್ತ ಹೊರಟೆ.
ಕಾರ್ಯಕ್ರಮ ಸಂಜೆ ಆರು ಗಂಟೆಗೆ ಪ್ರಾರಂಭವಾಗುವುದಿತ್ತು. ಆದರೆ ಐದೂವರೆಯ ಹೊತ್ತಿಗೇ ಸಾವಿರಾರು ಜನ ಬಂದು ಸೇರತೊಡಗಿದ್ದರು. ಸ್ವಾಮಿಗಳು ಬಂದು ವೇದಿಕೆಯನ್ನೇರುವ ಹೊತ್ತಿಗೆ ಸುಮಾರು ಒಂದು ಲಕ್ಷ ಜನ ಜಮಾಯಿಸಿದ್ದರು. ವಿಶಾಲವಾದ ವೇದಿಕೆಯನ್ನು ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಧ್ಯದಲ್ಲಿ ಒಂದು ಎತ್ತರದ ಸಿಂಹಾಸನದಂತಹ ಆಸನ. ಅದು ಸ್ವಾಮಿಗಳಿಗೆ. ಉಳಿದ ಹತ್ತಾರು ಆಸನಗಳು ಆಹ್ವಾನಿತರಾದ ಪ್ರಮುಖರಿಗೆ. ನಿಧಾನವಾಗಿ ಒಬ್ಬರು ವರದಿ ಹೇಳುತ್ತಿದ್ದಂತೆ ಒಬ್ಬರಾದ ಮೇಲೆ ಒಬ್ಬರಂತೆ ಪ್ರಮುಖರು ಬಂದು ಸ್ವಾಮಿಗಳಿಗೆ ಹಾರ ಸಮರ್ಪಣೆ ಮಾಡುತ್ತಿದ್ದರು. ಅದೇ ಒಂದು ವಿಶೇಷ ಕಾರ್ಯಕ್ರಮದಂತೆ ತೋರಿತು. ಮತ್ತೊಬ್ಬ ಕಿರಿಯ ಸ್ವಾಮಿಗಳು “ನನಗೆ ಒಂದು ಸುಂದರವಾದ ಹೂವಿನ ಮಾಲೆಯನ್ನು ಕೊಟ್ಟು ಗುರುಗಳಿಗೆ ಹಾಕಲು ಹೇಳಿದರು. ಅದೊಂದು ಅತ್ಯಂತ ಸುಂದರವಾದ, ಘಮಘಮ ಪರಿಮಳವನ್ನು ಬೀರುವ ಹೂಮಾಲೆ. ಅದನ್ನು ಕೈಯಲ್ಲಿ ಜೋಪಾನವಾಗಿ ಹಿಡಿದುಕೊಂಡು ಹರಿಪ್ರಸಾದ ಸ್ವಾಮಿಯವರ ಮುಂದೆ ನಿಂತೆ. ಅವರು ನನ್ನನ್ನು ದಿಟ್ಟಿಸಿ ನೋಡಿ, ಸಂತೋಷದ ಮಂದಹಾಸವನ್ನು ಬೀರಿದರು. ನಾನು ಹಾರ ಹಾಕಲು ಮತ್ತೊಂದು ಹೆಜ್ಜೆ ಮುಂದಿಟ್ಟೆ. ಇನ್ನೇನು ಹಾರ ಹಾಕಬೇಕು ಎನ್ನುವಷ್ಟರಲ್ಲಿ ಅವರು ಗಟ್ಟಿಯಾಗಿ, “I do nor want Floers” ನನಗೆ ಹೂವು ಬೇಡ” ಎಂದು ಬಿಟ್ಟರು. ನನ್ನಿಂದ ಏನಾದರೂ ತಪ್ಪಾಯಿತೇ ಎಂದು ಚಿಂತಿಸಿ, ಒಂದು ಕ್ಷಣ ನಿಂತು, “Swamij̧i then what do you want?” “ಸ್ವಾಮೀಜಿ, ಹಾಗಾದರೆ ಮತ್ತೆ ನಿಮಗೇನು ಬೇಕು?” ಎಂದು ಕೇಳಿದೆ. ಅವರು ಮತ್ತೊಮ್ಮೆ ಮರಳುಗೊಳಿಸುವ ನಗೆಯೊಂದನ್ನು ಚಿಮ್ಮಿಸಿ, “What do I do with flowers? I want you” “ನಾನು ಹೂವು ತೆಗೆದುಕೊಂಡು ಏನು ಮಾಡಲಿ? ನನಗೆ ನೀವು ಬೇಕು”. ಆ ನೇರವಾದ, ಪ್ರೀತಿಯ ಮಾತುಗಳಿಂದಲೇ ಅವರು ನನ್ನನ್ನು ಪಡೆದುಕೊಂಡು ಬಿಟ್ಟರು. ಆಶ್ಚರ್ಯವೆಂದರೆ ಈ ಕ್ಷಣದವರೆಗೆ ಅವರೆಂದೂ ನನ್ನ ಜೊತೆಗೆ ಇಂಗ್ಲೀಷಿನಲ್ಲಿ ಮಾತನಾಡಿರಲೇ ಇಲ್ಲ. ಅವರು ಕೇವಲ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಅದೇಕೆ ಈಗ ಇಂಗ್ಲೀಷಿನಲ್ಲಿ ಮಾತನಾಡಿದರೋ? ಬಹುಶ: ತಾವು ಹೇಳಬೇಕಾದ ಮಾತಿಗೆ ಇಂಗ್ಲೀಷೇ ಸರಿಯಾದ ವಾಹಕ ಎನ್ನಿಸಿದ್ದಿರಬೇಕು.
ನಂತರ, ಕುಳಿತು ಅವರ ಉಪನ್ಯಾಸವನ್ನು ಕೇಳಿದೆ. ಅದು ಇದ್ದದ್ದು ಗುಜರಾತಿ ಭಾಷೆಯಲ್ಲಿ. ನನಗೆ ಭಾಷೆ ಅರ್ಥವಾಗದಿದ್ದರೂ, ಅದರ ಹಿಂದಿನ ಚಿಂತನೆ ಅರ್ಥವಾಯಿತು. ಅವರ ಉಪನ್ಯಾಸದ ಮೂಲ ಚಿಂತನೆ ಆತ್ಮೀಯತೆ. ಅವರ ಪ್ರಕಾರ, ಆತ್ಮೀಯತೆಯೊಂದೇ ಇಂದು ಕಡಿಮೆಯಾಗಿರುವುದು. ಅದೊಂದಿದ್ದರೆ ಪ್ರಪಂಚದಲ್ಲಿ ಯಾವ ಸಮಸ್ಯೆಯೂ ಇರುವುದಿಲ್ಲ. ನಾವು ನಮ್ಮ ಈ ಸುಂದರ ಬದುಕುಗಳನ್ನು ಕೇವಲ ಮತ್ತೊಬ್ಬರ ತಪ್ಪುಗಳನ್ನು ಕಂಡು ಹಿಡಿಯುವುದರಲ್ಲಿಯೇ ಕಳೆಯುತ್ತೇವೆ. ಅದರ ಬದಲಾಗಿ, ಮತ್ತೊಬ್ಬರಲ್ಲಿಯ ಒಳ್ಳೆಯ ಗುಣಗಳನ್ನೇ ಕಾಣುತ್ತ, ಮೆಚ್ಚುತ್ತ ಸಾಗಿದರೆ ಬದುಕೆಷ್ಟು ಸುಂದರ!
ಮರುದಿನ ನಾನು ಬೆಂಗಳೂರಿಗೆ ಹೊರಟೆ. ಸ್ವಾಮಿಗಳು ಸ್ವಂತ: ತಾವೇ ಬಂದು, ಬೆಳಗಿನ ಫಲಾಹಾರವಾಗಿದೆಯೇ? ಅದೇನು ವಿಶೇಷ ಎಂದು ಕೇಳಿ ಖಾತ್ರಿ ಮಾಡಿಕೊಂಡರು, ಮೇಲಿಂದ ಮೇಲೆ ಬರುತ್ತಿರಬೇಕು ಎಂದು ಆಗ್ರಹದ ವಿನಂತಿ ಮಾಡಿದರು. ನನಗೆ ಆಮಂತ್ರಣವೇ ಬೇಕಿರಲಿಲ್ಲ.
ಮುಂದೆ ಎರಡು ತಿಂಗಳಿಗೇ ಮತ್ತೆ ಬರೋಡಾಕ್ಕೆ ಹೋಗಬೇಕಾಯಿತು. ನನ್ನ ಹತ್ತಿರ ಮಾತನಾಡಿದ ಮೇಲೆ ಗುರುಗಳಿಗೆ ತಾವೇ ಒಂದು ಶ್ರೇಷ್ಠ ಮಟ್ಟದ ಅಂತರ್‌ರಾಷ್ಟ್ರೀಯ ಶಾಲೆಯನ್ನು ಮಾಡುವ ಸಂಕಲ್ಪ ಬಂದಿತಂತೆ. ಅವರ ಸಂಕಲ್ಪವೆಂದರೆ ಅದೊಂದು ತೀರ್ಮಾನವೇ. ಇಡೀ ಯೋಗಿ ಡಿವೈನ್ ಸೊಸೈಟಿ ಅವರ ಹಿಂದೆ ಕೈಕಟ್ಟಿಕೊಂಡು ನಿಂತಿತ್ತು. ಅಲ್ಲಿಗೆ ಹೋಗಿ, ಸೂರತ್ ಹತ್ತಿರದ ಕೋಳಿ ಬರ್ತಾನಾ ಎನ್ನುವ ಸ್ಥಳದಲ್ಲಿ ಸುಮಾರು ಐವತ್ತು ಎಕರೆಯ ಜಮೀನನ್ನು ಶಾಲೆಗೆಂದು ತೀರ್ಮಾನಿಸಿದ್ದಾಯಿತು. ನಂತರ ನೆಲದ ಅಳತೆ, ಪ್ಲಾನ್, ಕಟ್ಟಡದ ನಿರ್ಮಾಣ, ಅದಕ್ಕೆ ಬೇಕಾದ ಪೀಠೋಪಕರಣಗಳು, ಪಾಠೋಪಕರಣಗಳು, ಶಿಕ್ಷಕರ ನೇಮಕಾತಿ ಮುಂತಾದ ಸಂಸ್ಕಾರಗಳೆಲ್ಲ ನಡೆಯಬೇಕಲ್ಲ! ಹೀಗಾಗಿ ನಾನು ಬರೋಡಾಕ್ಕೆ, ಸೂರತಕ್ಕೆ ಸುಮಾರು ಎರಡು ತಿಂಗಳಿಗೊಂದೊಂದು ಬಾರಿಯಾದರೂ ಹೋಗಲೇ ಬೇಕಾಗಿತ್ತು. ಆ ಸಮಯದಲ್ಲಿ ಗುರುಗಳನ್ನು ಹತ್ತಿರದಿಂದ ನೋಡುವ, ಅವರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವ ಅವಕಾಶ ದೊರೆಯಿತು.
ಅವರೊಂದಿಗಿದ್ದ ಪ್ರತಿಕ್ಷಣವೂ ಒಂದು ವಿಶೇಷ ಅನುಭವವೇ. ಅವೆಲ್ಲವುಗಳನ್ನು ದಾಖಲಿಸುವುದು ಸಾಧ್ಯವಿಲ್ಲವಾದ್ದರಿಂದ ಕೆಲವೊಂದನ್ನು ತಿಳಿಸಲು ಪ್ರಯತ್ನಿಸುತ್ತೇನೆ. ಈ ಘಟನೆಗಳು ಸ್ವಾಮಿಗಳ ವ್ಯಕ್ತಿತ್ವ, ಅವರ ಕರುಣೆ, ಪ್ರೀತಿಗಳನ್ನು ಸ್ವಲ್ಪ ಮಟ್ಟಿಗಾದರೂ ಕಟ್ಟಿಕೊಡಬಹುದು.
ನಾನು ಪ್ರತಿಬಾರಿ ಸೂರತಕ್ಕೆ ಹೋಗುವಾಗ ಅಹಮದಾಬಾದ (ಈಗ ಅಮ್ದಾವಾದ) ವಿಮಾನ ನಿಲ್ದಾಣದಲ್ಲಿ ಇಳಿದು, ಅವರೇ ಕಳುಹಿಸಿದ್ದ ಕಾರಿನಲ್ಲಿ ಹೈವೇದಲ್ಲಿ ಹೊರಡುತ್ತಿದ್ದೆ. ನಮ್ಮ ಕಾರು ಬರೋಡಾದಿಂದ ಬಂದು ಈ ರಸ್ತೆಗೆ ಸೇರುವ ಜಾಗೆಯಲ್ಲಿ ಸ್ವಾಮಿಗಳ ಕಾರು ಕಾದಿರುತ್ತಿತ್ತು. ನಾನು ಅದರಲ್ಲಿ ಸೇರಿಕೊಳ್ಳಬೇಕು. ಅದರಲ್ಲಿ ನಾಲ್ಕೇ ಜನ. ಅವರ ವಾಹನ ಚಾಲಕ ಮತ್ತು ಅಪ್ರತಿಮ ಸೇವಕ ಪ್ರಾಣೇಶ. ಅವನ ಪಕ್ಕ ಮತ್ತೊಬ್ಬ ಸ್ವಾಮಿಗಳು ಸ್ವಾಮಿನಾರಾಯಣನ ಮೂರ್ತಿ ಹಿಡಿದುಕೊಂಡು ಕುಳಿತಿರುತ್ತಿದ್ದರು. ಯಾಕೆಂದರೆ ಈ ಪರಂಪರೆಯಲ್ಲಿ ಒಬ್ಬರೇ ಸ್ವಾಮಿ ಅಡ್ಡಾಡುವಂತಿಲ್ಲ. ಅವರೊಂದಿಗೆ ಇನ್ನೊಬ್ಬರು ಇರುವುದು ಕಡ್ಡಾಯ. ಅದರಲ್ಲಿ ಇವರು ಸಂಸ್ಥೆಯ ಅಧ್ಯಕ್ಷರಾದ್ದರಿಂದ ಮತ್ತೊಬ್ಬ ಸನ್ಯಾಸಿ ಸ್ವಾಮಿನಾರಾಯಣನ ವಿಗ್ರಹವನ್ನು ಹಿಡಿದುಕೊಂಡು ಕುಳಿತಿರಬೇಕು. ಹಿಂದಿನ ಸೀಟಿನಲ್ಲಿ ಎಡಗಡೆಗೆ ಹರಿಪ್ರಸಾದ ಸ್ವಾಮಿಗಳು, ಅವರ ಪಕ್ಕ ಬಲಬದಿಗೆ ನನಗೆ ಸ್ಥಾನ. ಈ ಕಲ್ಪನಾತೀತವಾದ ಗೌರವಕ್ಕೆ ನಾನು ಸಂಕೋಚದಿಂದ ಮುದುಡಿ ಹೋಗುತ್ತಿದ್ದೆ.
ಕಾರು ಹೊರಟ ಹತ್ತು ನಿಮಿಷದ ನಂತರ ಸ್ವಾಮಿಗಳು ತಮ್ಮ ಪಕ್ಕದ ಪೆಟ್ಟಿಗೆಯನ್ನು ತೆರೆದು ಒಂದು ದೊಡ್ಡ ಬಟ್ಟಲನ್ನು ನನಗೆ ಕೊಡುತ್ತಿದ್ದರು. ಅದರ ತುಂಬ ಕತ್ತರಿಸಿ ಹೋಳು ಮಾಡಿದ ತಾಜಾ ಹಣ್ಣುಗಳು! ಅವುಗಳಿಗೆ ಧೂಳು ತಾಕದಂತೆ ಪ್ಲಾಸ್ಲಿಕ್ ಆವರಣ. ತಾವೇ ಆವರಣವನ್ನು ತೆಗೆದು, ಹಣ್ಣುಗಳ ಮೇಲೆ ಉಪ್ಪು, ಮೆಣಸಿನ ಪುಡಿಯನ್ನು ಹದವಾಗಿ ಚಿಮಿಕಿಸಿ, ಮತ್ತೊಂದು ಫೋರ್ಕನ್ನು ನನಗೆ ಕೊಟ್ಟು, “ತಿನ್ನಿ, ಬೆಳಿಗ್ಗೆ ತುಂಬ ಚೆನ್ನಾಗಿರುತ್ತದೆ” ಎಂದು, ನಾನು ತಿಂದು ಮುಗಿಸುವವರೆಗೂ ಅದನ್ನೇ ಪ್ರೀತಿಯಿಂದ ನೋಡುವರು. ನಾನೇನಾದರೂ ಮಾತನಾಡಲು ಹೊರಟರೆ, ಮೆಲುವಾಗಿ ಭುಜ ತಟ್ಟಿ, “ಮೊದಲು ಸಂತೋಷವಾಗಿ ತಿನ್ನಿ, ಯಾವ ವಿಚಾರವೂ ಬೇಡ. ಆಮೇಲೆ ಮಾತನಾಡೋಣ” ಎನ್ನುವರು.
ಏನು ಮಾಡಿದರೂ ತುಂಬ ಸಂತೋಷವಾಗಿ ಮಾಡಬೇಕು, ಅದರ ಸ್ವಾದವನ್ನು ಪಡೆಯಬೇಕು ಎಂಬುದು ಅವರ ವಿಚಾರ. ಅದಕ್ಕೇ ಅವರು ಪ್ರತಿಯೊಂದು ಮಾತಿನಲ್ಲೂ, ಕೃತಿಯಲ್ಲೂ ಅದೇ ಸಂತೋಷವನ್ನು ಪಡೆಯುವುದು ಮಾತ್ರವಲ್ಲ, ತಮ್ಮ ಸುತ್ತಮುತ್ತಲಿದ್ದವರಿಗೂ ಹಂಚುತ್ತಿದ್ದರು.
ಅವರೊಂದು ಸಂತೋಷದ, ತೃಪ್ತಿಯ ಬುಗ್ಗೆ, ಅವರೊಂದಿಗೆ ಇರುವವರು, ಅವರೊಂದಿಗಿರುವಷ್ಟು ಕಾಲ ಎಂದಿಗೂ ದು:ಖದ, ನೋವಿನ, ಋಣಾತ್ಮಕ ಚಿಂತನೆಗಳನ್ನು ಮಾಡುವುದು ಸಾಧ್ಯವಿರಲಿಲ್ಲ. ಭಗವಾನ್ ಬುದ್ಧ ಹೀಗೆಯೇ ಇದ್ದ ಎಂದು ಓದಿದ್ದೆ, ಕೇಳಿದ್ದೆ.