ಕೋವಿಡ್ನಿಂದಾಗಿ ಕಳೆದ ಎರೆಡು ವರ್ಷ ಅರಮನೆ ಆವರಣಕಷ್ಟೇ ಸೀಮಿತವಾಗಿದ್ದ ದಸರಾ ಉತ್ಸವ ಈ ಬಾರಿ ಅದ್ಧೂರಿಯಾಗಿ ಜರುಗಿತು.
ಮಧ್ಯಾಹ್ನ 2.35ರ ಸುಮಾರಿಗೆ ಶುಭ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿ ಧ್ವಜ ಪೂಜೆ ನೆರವೇರಿಸಿದರು. ಬಳಿಕ ಸ್ತಬ್ದಚಿತ್ರ ಮತ್ತು ಕಲಾತಂಡಗಳ ಮೆರವಣಿಗೆ ಆರಂಭವಾಯಿತು.
ಎರಡೂವರೆ ಗಂಟೆಗಳ ಕಾಲ ಜನಸಾಗರವನ್ನು ಹಿಡಿದಿಟ್ಟ ಮೆರವಣಿಗೆಯ ಬಳಿಕ, ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಅಭಿಮನ್ಯು ಆನೆ ರಾಜ ಗಾಭೀರ್ಯದಿಂದ ವೇದಿಕೆ ಮುಂಭಾಗಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವ ಸುನೀಲ್ ಕುಮಾರ್, ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಗೌತಮ್ ಬಗಾದಿ, ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.
750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಆನೆ ಅಭಿಮನ್ಯು ಹೊತ್ತು ರಾಜಗಾಂಭೀರ್ಯದೊಂದಿಗೆ ನಡೆಯುವ ಮೂಲಕ ಜಂಬೂಸವಾರಿ ನೆರವೇರಿತು. ಅದ್ಧೂರಿ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು.