ಬಾಗಲಕೋಟ: ಕಳೆದೊಂದು ವಾರದಿಂದ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಹತ್ತಾರು ಹಳ್ಳಿಗಳಲ್ಲಿನ ವಿದ್ಯಾರ್ಥಿಗಳು ಅಲ್ಲಲ್ಲಿ ಪ್ರತಿಭಟನೆ ಮೂಲಕ ರಸ್ತೆ ತಡೆ ನಡೆಸುತ್ತ, ನಿಗದಿತ ಸಮಯಕ್ಕೆ ಬಸ್ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
ತಾಲೂಕಿನ ಜಮಖಂಡಿ-ಕುಡಚಿ, ಬನಹಟ್ಟಿ-ಮುಧೋಳ ಹಾಗು ಜಮಖಂಡಿ-ಗೋಕಾಕ ರಸ್ತೆಗಳಲ್ಲಿ ದಿನಂಪ್ರತಿ ರಸ್ತೆ ತಡೆ ಸಾಮಾನ್ಯವಾಗಿದ್ದು, ದೂರದಪ್ರಯಾಣಿಕರು ಎಲ್ಲಿ? ಯಾವಾಗ? ಯಾವ ದಿನ ಈ ಪ್ರತಿಭಟನೆ ಮಧ್ಯ ಸಿಲುಕುತ್ತಾರೋ ತಿಳಿಯದಾಗಿದೆ.
ಮಂಗಳವಾರ ಬಂಡಿಗಣಿ ಕ್ರಾಸ್ ಬಳಿ ಕಾಲೇಜು ವಿದ್ಯಾರ್ಥಿಗಳು ಬೆಳಿಗ್ಗೆ ಏಕಾಏಕಿ ರಸ್ತೆ ಮೇಲೆ ಕಲ್ಲು ಸುರಿದು ಸಂಚಾರ ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಗಿಳಿದು ಸಾರಿಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಹಟ ಮಾಡುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರೂ ಮಣಿಯದ ಪ್ರತಿಭಟನಾಕಾರರು ಅಧಿಕಾರಿಗಳ ಸಮ್ಮುಖದಲ್ಲಿ ಪರಿಹಾರವಾಗಲೇಬೇಕು ಅಲ್ಲಿಯವರೆಗೆ ರಸ್ತೆ ತಡೆ ನಿಲ್ಲುವದಿಲ್ಲವೆಂದರು.ಆದರೆ ಜಮಖಂಡಿ ಸಾರಿಗೆ ಘಟಕವು ಯಾವದೇ ರೀತಿ ಸ್ಪಂದಿಸದೆ ಹಲವಾರು ತಿಂಗಳಿಂದ ಈ ಭಾಗದ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಸ್‌ನ ಸೌಕರ್ಯದ ಅವಶ್ಯವಿದ್ದರೂ ಯಾವದೇ ಕಾಳಜಿವಹಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದರಿಂದ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆಯಾಯಿತು.
ಮಣಿಯದ ಅಧಿಕಾರಿಗಳು
ತೇರದಾಳ ಕ್ಷೇತ್ರದ ಜನತೆಗೆ ಬಸ್ ಬೇಡಿಕೆಗೆ ಸಂಬಂಧ ಯಾವದೇ ಅನುಕೂಲವಿಲ್ಲ. ಬದಲಾಗಿ ಸಮೀಪದ ಜಮಖಂಡಿ ಅಥವಾ ಮುಧೋಳ ಘಟಕವನ್ನೇ ಅವಲಂಬಿಸಬೇಕು. ಆಯಾ ತಾಲೂಕುಗಳ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಮಾತ್ರ ನೀಗಿಸುತ್ತಿರುವ ಅಧಿಕಾರಿಗಳು ರಬಕವಿ-ಬನಹಟ್ಟಿ ತಾಲೂಕನ್ನು ಮಲತಾಯಿ ಧೋರಣೆಯಂತೆ ಬಿಂಬಿಸುತ್ತಿರುವದು ವಿದ್ಯಾರ್ಥಿ ಹಾಗು ಪ್ರಯಾಣಿಕರಲ್ಲಿ ಬೇಸರ ತಂದಿದೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಕ್ಷೇತ್ರದ ಶಾಸಕರೂ ಸಹಿತ ಬಸ್ ಸೌಕರ್ಯಕ್ಕೆ ಹಲವಾರು ಸರ್ಕಸ್ ಮಾಡಿದರೂ ಅಧಿಕಾರಿಗಳು ಮಾತ್ರ ಮಣಿಯುತ್ತಿಲ್ಲ. ಒಟ್ಟಾರೆ ಜನಪ್ರತಿನಿಧಿಗಳಿಗೇ ಸವಾಲಾಗಿರುವ ಸಾರಿಗೆ ಇಲಾಖೆಯು ಜನಸಾಮಾನ್ಯರ ಪಾಡಿಗೆ ಗಗನಕುಸುಮವಾಗುವಲ್ಲಿ ಕಾರಣವಾಗಿದೆ. ತಾಲೂಕಿನಾದ್ಯಂತ ಬಸ್‌ನ ಸೌಕರ್ಯ ಸುಗಮವಾಗಿ ದೊರಕಬೇಕಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ಯಾವ ರೀತಿ ನಿರ್ಧಾರ ಕೈಗೊಂಡು ತಾಲೂಕಿನ ಜನತೆಗೆ ಹಾಗು ವಿದ್ಯಾರ್ಥಿಗಳಿಗೆ ಪ್ರಯಾಣದ ಅವಕಾಶ ಕಲ್ಪಿಸುವರೋ ಕಾದು ನೋಡಬೇಕು.