ಸವದತ್ತಿ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾದ ಸವದತ್ತಿ ಶಾಸಕ, ವಿಧಾನಸಭೆ ಉಪಾಧ್ಯಕ್ಷ ಆನಂದ ಮಾಮನಿ(56) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರವಿವಾರ ಸವದತ್ತಿಯ ಚಂದ್ರಮಾ ಫಾರ್ಮ ಹೌಸ್ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ರವಿವಾರ ಬೆಳಿಗ್ಗೆ ಆನಂದ ಮಾಮನಿಯವರ ಪಾರ್ಥಿವ ಶರೀರ ರವಿವಾರ ಬೆಳಿಗ್ಗೆ ಸವದತ್ತಿಯ ನಿವಾಸ ತಲುಪಿತು. ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಕುಟುಂಬಸ್ಥರಿಂದ ಪೂಜೆ ಸಲ್ಲಿಸಲಾಯಿತು. ತದನಂತರ ಅವರ ಪಾರ್ಥಿವ ಶರೀರವನ್ನು ತಾಲೂಕಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ ೧೨ ರಿಂದ ಸಂಜೆ ೫ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಅನುಕೂಲ ಮಾಡಿಕೊಡಲಾಯಿತು.
ನಂತರ ಸವದತ್ತಿಯ ಮುಖ್ಯ ಬೀದಿಗಳಾದ ಗಾಂಧಿ ಚೌಕ, ಬಂಡಿ ಓಣಿ, ಹನುಮಗಿರಿ ಓಣಿ, ಮೂಲಕ ಚಂದ್ರಮಾ ಫಾರ್ಮ ಹೌಸ್ ತಲುಪಿತು. ವಿವಿಧ ಮಠಾಧೀಶರ ಸಮ್ಮುಖದಲ್ಲಿ ಆನಂದ ಮಾಮನಿ ಅವರ ಪಾರ್ಥಿವ ಶರೀರಕ್ಕೆ ಧಾರ್ಮಿಕ ವಿಧಿ ವಿಧಾನ ನೆರವೇರಿಸಿ ಪೂಜೆ ಸಲ್ಲಿಸಿದ ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ನೆರೆದಿದ್ದ ಗಣ್ಯರು, ರಾಜಕಾರಣಿಗಳು, ಜನಪ್ರತಿನಿಧಿಗಳು, ಅಭಿಮಾನಿಗಳು ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದರು.