ರಾಮ ಮನಗೂಳಿ
ಬಾಗಲಕೋಟೆ ನಗರ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ನಂತರ ನಡುಗಡ್ಡೆಯಾಗಿ ಉಳಿಯುವ ನಗರದ ಕಿಲ್ಲಾ, ಹಳಪೇಟೆ, ಜೈನಪೇಟೆ ಭಾಗಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ ಹಿನ್ನೀರು ಸ್ವಾಧೀನ ಯೋಜನೆ ಅಡಿ ಪುನರ್ವಸತಿಗೆ ಸರಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಕ್ಷೇತ್ರದ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಇಚ್ಚಾಶಕ್ತಿ ಫಲವಾಗಿ ಇದು ಕಾರ್ಯಗತಗೊಂಡಿದೆ ಎಂದು ಹೇಳಬಹುದು.
ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ ನಂತರ ಸರಕಾರದ ಅಧಿಕೃತ ಆದೇಶ ಹೊರ ಬಿದ್ದಿದೆ. ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು, ಕೃಷ್ಣಾ ಜಲಭಾಗ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದಿ. ೧೨ರಂದು ಬರೆದ ಪತ್ರದಲ್ಲಿ ಬಾಗಲಕೋಟೆಯ ವಾರ್ಡ ನಂ೧, ೨, ೩, ೫, ೬, ೭ ಹಾಗೂ ೯ರಲ್ಲಿನ ರಸ್ತೆ ಸಂಪರ್ಕ ಕಳೆದುಕೊಳ್ಳುವ ನಡುಗಡ್ಡೆಯಾಗಿ ಉಳಿಯುವ ೧೧೦೦ ಕಟ್ಟಡಗಳನ್ನು ಸ್ವಾಧೀನ ಪಡೆಸಿಕೊಳ್ಳುವದಕ್ಕೆ ಅನುಮತಿ ನೀಡಿರುವದನ್ನು ಖಚಿತ ಪಡಿಸಿದ್ದಾರೆ.
ಪೂರ್ವ ಯೋಜನೆಯಂತೆ ೫೨.೧೬ ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು ಈಗ ಅದು ಪರಿಷ್ಕರಿಸಿ ೧೧೩.೯೮ ಕೋಟಿ ರೂಗಳ ಪ್ರಸ್ತಾವನೆಯನ್ನು ಭೂಸ್ವಾಧೀನ ಆರ್&ಆರ್ ಅಡಿ ಒದಗಿಸಲಾಗಿರುವ ಅನುದಾನದಲ್ಲಿ ಬಳಸಲು ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದು ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
ನಡುಗಡ್ಡೆಯಾಗಿ ಉಳಿಯುವ ಪ್ರದೇಶಗಳ ಸಮಸ್ಯೆ ಬಗ್ಗೆ ೨೦೦೬ರಿಂದಲೇ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ಗಮನ ಸೆಳೆಯಲಾಗಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗಲೂ ಒತ್ತಾಯಿಸಲಾಗಿತ್ತು ಆದರೂ ಆರ್ಥಿಕ ಇಲಾಖೆಯ ಅಡತಡೆಯಿಂದಾಗಿ ಆಗಿರಲಿಲ್ಲ. ಡಾ.ಚರಂತಿಮಠ ಶಾಸಕರಾದ ದಿನದಿಂದಲೇ ಇದಕ್ಕಾಗಿ ಹೋರಾಟ ನಡೆಸಿದ್ದು ಮುಖ್ಯಮಂತ್ರಿಗಳನ್ನು ಮನವೊಲಿಸಿ ಆರ್ಥಿಕ ಇಲಾಖೆಗೆ ವಿಷಯ ಮನವರಿಕೆ ಮಾಡಿಕೊಟ್ಟು ಅನುಮತಿ ಪಡೆದು ಈಗ ಸ್ವಾಧೀನ ಕಾರ್ಯಕ್ಕೆ ಅನುಮತಿ ಸಿಗುವಂತೆ ಮಾಡಿದ್ದಾರೆ. ಅಗತ್ಯ ೧೪೦೦ ಕೋಟಿ ರೂಗಳನ್ನು ಒದಗಿಸುವ ಬಗ್ಗೆಯೂ ಈಗ ಯಾವ ಅಡತಡೆಯೂ ಇಲ್ಲ. ಇದರಿಂದಾಗಿ ಪುನರ್ವಸತಿ ಕಾರ್ಯ ಸುಗಮಗೊಂಡಿದ್ದು ಆದಷ್ಟು ಬೇಗ ಈ ೧೧೦೦ ಕಟ್ಟಡಗಳ ಸ್ವಾಧೀನ ಕಾರ್ಯ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಶಿರೂರ. ಭಗವತಿ ಏತ ನೀರಾವರಿ ಯೋಜನೆ, ಅಗತ್ಯ ಅನುಮತಿ, ಹಣಕಾಸು ನೆರವು, ಮುಚಖಂಡಿ ಕೆರೆ ಭರ್ತಿಗೆ ೪೯ ಕೋಟಿ ರೂಗಳ ಅನುದಾನಕ್ಕೆ ಒಪ್ಪಿಗೆ ಪಡೆಯುವಲ್ಲಿ ಶಾಸಕರು ಯಶಸ್ವಿಯಾಗುವ ಮೂಲಕ ಗ್ರಾಮೀಣ ಪ್ರದೇಶದ ಅಗತ್ಯಗಳಿಗೆ ಅದರಲ್ಲೂ ವಿಶೇಷವಾಗಿ ನೀರಾವರಿಗೆ ಆದ್ಯತೆ ನೀಡಿರುವದು ಒಳ್ಳೆಯ ಬೆಳವಣಿಗೆ ಇದು ಅವರ ಇಚ್ಚಾಶಕ್ತಿ ಹಾಗೂ ಕಾರ್ಯ ಕ್ಷಮತೆ ಪ್ರತಿಫಲ ಎಂದು ಹೇಳಬಹುದಾಗಿದೆ.