ʻಕಾಂತಾರ -೨ʼಗೆ ದೈವದ ಅಭಯ

Advertisement

ಮಂಗಳೂರು: ದಾಖಲೆ ಬರೆದ ‘ಕಾಂತಾರ’ ಚಿತ್ರದ ಯಶಸ್ಸಿಗೆ ಚಿತ್ರ ತಂಡ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಹರಕೆ ನೇಮ ಸಲ್ಲಿಸಿದೆ. ಇದೇ ವೇಳೆ ದೈವವು ಕಾಂತಾರ-೨ ಚಿತ್ರ ನಿರ್ಮಾಣಕ್ಕೆ ಅಭಯ ನೀಡಿದೆ.
ಹೊರವಲಯದ ಪಚ್ಚನಾಡಿಯ ಬಂದಲೆ ಎಂಬಲ್ಲಿ ಗುರುವಾರ ರಾತ್ರಿ ಈ ಹರಕೆ ನೇಮ ನಡೆದಿದೆ ಎಂದು ಹೇಳಲಾಗಿದೆ. ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ಹೊಂಬಾಳೆ ಫಿಲ್ಮ್‌ನ ವಿಜಯ್ ಕಿರಗಂದೂರು ಸೇರಿದಂತೆ ಇಡೀ ಚಿತ್ರ ತಂಡ ಹಾಜರಾಗಿದೆ. ಕದ್ರಿ ಮಂಜುನಾಥ ದೇವಸ್ಥಾನದ ಸೇವೆ ನಡೆಸುವ ಮಡಿವಾಳ ಸಮುದಾಯದ ಮನೆಯಲ್ಲಿ ಈ ಹರಕೆ ನೇಮ ನಡೆದಿದ್ದು, ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ಹರಕೆ ನೇಮ ಸಲ್ಲಿಸಲಾಗಿದೆ.
ನೇಮದ ವೇಳೆ ಅಣ್ಣಪ್ಪ ಪಂಜುರ್ಲಿ ದೈವ ಚಿತ್ರ ತಂಡಕ್ಕೆ ಅಭಯ ನೀಡಿದೆ. ಕಾಂತಾರ ನಿರ್ಮಿಸುವಾಗ ಹತ್ತು ಬಾರಿ ಯೋಚಿಸಿದ್ದೀರಿ, ಕಾಂತಾರ-೨ ಚಿತ್ರ ನಿರ್ಮಿಸುವುದಿದ್ದರೆ ನೂರು ಬಾರಿ ಯೋಚಿಸುವಂತೆ ಎಚ್ಚರಿಕೆಯನ್ನು ನೀಡಿದೆ. ಧರ್ಮಸ್ಥಳ ಹಾಗೂ ಕದ್ರಿಯ ಮಂಜುನಾಥ ದೇವರನ್ನು ನಂಬಿಕೊಂಡು, ಈ ಹಿಂದೆ ಇದ್ದ ಚಿತ್ರ ತಂಡದ ಜತೆ ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ ಎಂದು ದೈವ ಅಭಯ ನೀಡಿದೆ ಎಂದು ಹೇಳಲಾಗಿದೆ. ನೀವು ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ ಎಂದು ಅಭಯವನ್ನೂ ಕೊಟ್ಟಿದೆ. ಕಾಂತಾರ-೨ ಚಿತ್ರ ನಿರ್ಮಾಣ ಕುರಿತಂತೆ ಚಿತ್ರ ತಂಡ ದೈವದ ಬಳಿ ಭಿನ್ನವಿಸಿದೆ ಎಂದು ಹೇಳಲಾಗಿದೆ. ಕಾಂತಾರ-೨ ನಿರ್ಮಾಣದ ಕುರಿತು ಚಿತ್ರ ತಂಡ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.